ರಾಷ್ಟ್ರೀಯ

ದೇಶದಲ್ಲಿ ರೈತರ ಹಿತರಕ್ಷಣೆ ನಮ್ಮ ಕರ್ತವ್ಯವಾಗಿದೆ: ಮೋದಿ

Pinterest LinkedIn Tumblr

ಪುದುಚೆರಿ: ನಮ್ಮ ದೇಶದ ರೈತರು ನಾವೀನ್ಯತೆ ಹೊಂದಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಉತ್ತಮ ರಸ್ತೆಗಳ ನಿರ್ಮಾಣ ಕೂಡ ಅವುಗಳಿಗೆ ಪೂರಕವಾದದ್ದು. ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಮೂಲಕ ಈ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಗಳ ಬೆಳವಣಿಗೆಯಾಗಿ ಸ್ಥಳೀಯ ಯುವಕರಿಗೆ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಪುದುಚೆರಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಮುಂಬರುವ ವರ್ಷಗಳಲ್ಲಿ ಆರೋಗ್ಯ ಸೇವೆ ವಲಯ ಪ್ರಮುಖ ಪಾತ್ರ ವಹಿಸಲಿದೆ. ಆರೋಗ್ಯ ವಲಯದಲ್ಲಿ ಹೂಡಿಕೆ ಮಾಡುವ ದೇಶಗಳು ಬೆಳಗುತ್ತವೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿಕೊಡಬೇಕೆಂಬ ಮುಖ್ಯ ಉದ್ದೇಶದೊಂದಿಗೆ ನಾನು ಇಂದು ಇಲ್ಲಿ ರಕ್ತ ಕೇಂದ್ರವನ್ನು ಉದ್ಘಾಟಿಸುತ್ತಿದ್ದೇನೆ ಎಂದರು.

ಪುದುಚೆರಿ ವಿಧಾನಸಭೆಗೆ ಮುಂಬರುವ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ನಂತರ ರ್ಯಾಲಿಯನ್ನುದ್ದೇಶಿಸಿ ಕೂಡ ಪ್ರಧಾನ ಮಂತ್ರಿ ಮಾತನಾಡಿದರು. ಇಂದು ಪುದುಚೆರಿ ಜನರಲ್ಲಿ ನಾನು ಶಕ್ತಿ ಮತ್ತು ಉತ್ಸಾಹವನ್ನು ನೋಡುತ್ತಿದ್ದೇನೆ. ನಿಜಕ್ಕೂ ಅದ್ಭುತವಾಗಿದೆ. ಬದಲಾವಣೆಯ ಗಾಳಿ ಇಲ್ಲಿ ಬೀಸುತ್ತಿದೆ ಎಂಬ ಸೂಚನೆ ಕಂಡುಬರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪುದುಚೆರಿಯ ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು, ಪುದುಚೆರಿಯ ಕಾಂಗ್ರೆಸ್ ಸರ್ಕಾರ ತನ್ನ ದುರ್ಬಲ ಆಡಳಿತ ಮೂಲಕ ಪ್ರತಿ ವಲಯವನ್ನು ಹಾಳು ಮಾಡಿದೆ. ಸಾಂಪ್ರದಾಯಿಕ ಗಿರಣಿಗಳು ಮುಚ್ಚಿವೆ. ಸ್ಥಳೀಯ ಉದ್ಯಮಗಳು ಸಂಕಷ್ಟದಲ್ಲಿವೆ. ಜನರಿಗಾಗಿ ಕೆಲಸ ಮಾಡುವುದರಲ್ಲಿ ಕಾಂಗ್ರೆಸ್ ಗೆ ನಂಬಿಕೆಯಿಲ್ಲ ಎಂದು ಆರೋಪಿಸಿದರು.

2016ರಲ್ಲಿ ಜನರಿಂದ ಬಹುಮತ ಸಿಕ್ಕಿ ಪುದುಚೆರಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಬದಲಾಗಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೇವೆ ಸಲ್ಲಿಸುವುದರಲ್ಲಿ ನಿರತವಾಗಿದ್ದರು. ಅವರ ಆದ್ಯತೆ ಬೇರೆಯಾಗಿತ್ತು. ನಿಮ್ಮ ಮಾಜಿ ಮುಖ್ಯಮಂತ್ರಿಗಳು ಪಕ್ಷದ ನಾಯಕರ ಚಪ್ಪಲಿ ಹೊರುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರು.

ಕೆಲವು ದಿನಗಳ ಹಿಂದೆ ಇಡೀ ರಾಷ್ಟ್ರವು ವೀಡಿಯೊವನ್ನು ನೋಡಿದೆ. ಅಸಹಾಯಕ ಮಹಿಳೆಯೊಬ್ಬರು ಚಂಡಮಾರುತ ಮತ್ತು ಪ್ರವಾಹದ ಸಮಯದಲ್ಲಿ ಪುದುಚೇರಿ ಸರ್ಕಾರ ಮತ್ತು ಸಿಎಂ ನಿರ್ಲಕ್ಷ್ಯದ ಬಗ್ಗೆ ದೂರು ನೀಡುತ್ತಿದ್ದರು. ಮಹಿಳೆಯ ಕಣ್ಣುಗಳಲ್ಲಿನ ನೋವನ್ನು ನೋಡಬಹುದು. ಆಕೆಯ ಧ್ವನಿಯಲ್ಲಿ ನೋವಿತ್ತು. ರಾಷ್ಟ್ರಕ್ಕೆ ಸತ್ಯವನ್ನು ಹೇಳುವ ಬದಲು, ಸಿಎಂ ಅವರು ಮಹಿಳೆಯ ಮಾತುಗಳನ್ನು ತಪ್ಪಾಗಿ ಅನುವಾದ ಮಾಡಿದರು. ಜನರಿಗೆ ಮತ್ತು ತಮ್ಮದೇ ಪಕ್ಷದ ನಾಯಕನಿಗೆ ಸುಳ್ಳು ಹೇಳಿದರು. ಸುಳ್ಳಿನ ಆಧಾರದ ಮೇಲೆ ಸಂಸ್ಕೃತಿಯನ್ನು ಹೊಂದಿರುವ ಪಕ್ಷವು ಎಂದಾದರೂ ಜನರಿಗೆ ಸೇವೆ ಸಲ್ಲಿಸಬಹುದೇ ಎಂದು ಪ್ರಶ್ನಿಸಿದರು.

ಭಾರತದಾದ್ಯಂತ ಜನರು ಕಾಂಗ್ರೆಸ್ ನ್ನು ತಿರಸ್ಕರಿಸುತ್ತಿದ್ದಾರೆ. ಸಂಸತ್ತಿನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಕಾಂಗ್ರೆಸ್ ಸಂಸದರಿದ್ದಾರೆ. ಊಳಿಗಮಾನ್ಯ ರಾಜಕೀಯ, ವಂಶ ರಾಜಕೀಯ, ಕುಟುಂಬ ರಾಜಕಾರಣದ ಕಾಂಗ್ರೆಸ್ ಸಂಸ್ಕೃತಿ ದೇಶದಲ್ಲಿ ಕೊನೆಯಾಗಿ ಯುವ, ಆಕಾಂಕ್ಷಿತ ಮತ್ತು ಭವಿಷ್ಯದಲ್ಲಿ ಏಳಿಗೆಯನ್ನು ಬಯಕೆಯ ಭಾರತವನ್ನು ಜನ ಇದಿರುನೋಡುತ್ತಿದ್ದಾರೆ ಎಂದು ಹೇಳಿದರು.

Comments are closed.