ಕರ್ನಾಟಕ

ನಾಡಿನ‌ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿಗೆ ರಾಷ್ಟ್ರಪತಿಗಳ ಭೇಟಿ | ಕೊಡಗು ಜಿಲ್ಲಾ ಪ್ರವಾಸ ಹೀಗಿತ್ತು….

Pinterest LinkedIn Tumblr

ಕೊಡಗು: ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಕುಟುಂಬಿಕರಾಗಿ ಇಂದು ಆಗಮಿಸಿದರು.

ಶನಿವಾರ ಬೆಳಗ್ಗೆ 11-00 ಗಂಟೆಗೆ ಭಾಗಮಂಡಲ ಹೆಲಿಪ್ಯಾಡಗೆ ಭಾರತೀಯ ವಾಯು ಪಡೆಯ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ರಾಷ್ಟ್ರಪತಿಯವರನ್ನು ಕರ್ನಾಟಕ ರಾಜ್ಯದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಸೋಮಣ್ಣ ಆತ್ಮೀಯವಾಗಿ ಬರ ಮಾಡಿಕೊಂಡರು.

ಬಳಿಕ ರಾಷ್ಟ್ರಪತಿಯವರು ಸಕುಟುಂಬಿಕರಾಗಿ ಕಾವೇರಿ ಉಗಮಸ್ಥಾನ ತಲಕಾವೇರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ ಪವಾರ್, ಜಿಲ್ಲಾಧಿಕಾರಿ ಚಾರುಲತ ಸೋಮಲ್ ಪೋಲಿಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಸಿಇಒ ಭನ್ವರ್ ಸಿಂಗ್ ಮೀನಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಅಪರಾಹ್ನ 3-00 ಗಂಟೆಗೆ ಮಡಿಕೇರಿ ನಗರದ ವೀರ ಸೇನಾನಿ ಜನರಲ್ ತಿಮ್ಮಯ್ಯ ಮೊಮೋರಿಯಲ್ ಮ್ಯೂಸಿಯಮ್ ‘ ಸನ್ನಿಸೈಡ್’ ಗೆ ಭೇಟಿ ನೀಡಿ ಆ ಮ್ಯೂಸಿಯಂ ನ್ನು ಲೋಕಾರ್ಪಣೆಗೊಳಿಸಿದರು. ನಂತರ ಸಂಜೆ ಮಡಿಕೇರಿಯ ಎಫ್.ಎಂ.ಸಿ. ಹೆಲಿಪ್ಯಾಡ್ ನಿಂದ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಬೆಂಗಳೂರಿಗೆ ತೆರಳಿದರು.

ಈ ಸಂದರ್ಭದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗು ಇನ್ನಿತರ ಹಿರಿಯ ಸೇನಾಧಿಕಾರಿಗಳು, ಸ್ಥಳೀಯ ನಿವೃತ್ತ ಸೇನಾಧಿಕಾರಿಗಳು, ಸ್ಥಳೀಯ ರಾಜಕೀಯ ಪ್ರತಿನಿಧಿಗಳು ಹಾಗು ಗಣ್ಯರು ಹಾಜರಿದ್ದರು.

ರಾಷ್ಟ್ರಪತಿಯವರು ಕೊಡಗು ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಬಂದೋಬಸ್ತ್ ವ್ಯವಸ್ಥೆಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ, ದಕ್ಷಿಣ ವಲಯದ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಮಾರ್ಗದರ್ಶನದಲ್ಲಿ ಏರ್ಪಡಿಸಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಲಾಯಿತು.

Comments are closed.