ಕರಾವಳಿ

ಕೋಟಿ ಚೆನ್ನಯರು ಹಾಗೂ ಬಿಲ್ಲವರ ನಿಂಧನೆ :ತಪ್ಪುಕಾಣಿಕೆ ಸಲ್ಲಿಸಿ, ಬಹಿರಂಗ ಕ್ಷಮೆ ಯಾಚಿಸುವಂತೆ ಆಗ್ರಹ

Pinterest LinkedIn Tumblr

ಮಂಗಳೂರು / ಸುರತ್ಕಲ್.ಫೆಬ್ರವರಿ.06: ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ಕೋಟಿ ಚೆನ್ನಯ ಎಂಬ ವೀರ ಪುಣ್ಯಪುರುಷರ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಎಂದು ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ. ಅನೇಕ ಪವಾಡಗಳು ಕಾರಣಿಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ.

ಹೀಗಿರುವಾಗ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಎಂಬ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತಾಡಿರುವುದು ಖಂಡನೀಯ ಮಾತ್ರವಲ್ಲ ಆಶ್ಚರ್ಯ ಹುಟ್ಟಿಸುತ್ತದೆ ಎಂದು ಹೇಳಿದರು.

ಜಗದೀಶ್ ಅಧಿಕಾರಿ

ಬಿಲ್ಲವ ಸಮುದಾಯದ ಯುವಕರನ್ನು ಚುನಾವಣೆ ಬಂದಾಗ ತಮಗಿಷ್ಟ ಬಂದಂತೆ ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಬಳಿಕ ಅಧಿಕಾರದ ವಿಷಯ ಬಂದಾಗ ದೂರ ತಳ್ಳುವ ಬಿಜೆಪಿ ಮುಖಂಡರು ಬಿಲ್ಲವ ಸಮುದಾಯ ಮತ್ತು ಆರಾಧ್ಯ ಶಕ್ತಿಗಳ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಬಿಲ್ಲವ ಯುವಕರು ಪ್ರತೀ ಬಾರಿ ಹರಕೆಯ ಕುರಿಗಳಾಗಿ ಮತೀಯ ದ್ವೇಷ, ಕೋಮು ಗಲಭೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಜಗದೀಶ್ ಅಧಿಕಾರಿಯಂತಹ ರಾಜಕಾರಣಿ ಬಿಲ್ಲವ ಸಮುದಾಯದ ತಾಳ್ಮೆ ಪರೀಕ್ಷಿಸುವುದು ಬೇಡ. ಕೋಟಿ ಚೆನ್ನಯರ ಜೀವನ ಮತ್ತು ಹೋರಾಟವನ್ನು ಲೇವಡಿ ಮಾಡಲು ಇವರಿಗೆ ಅವಕಾಶ ಕೊಟ್ಟವರಾರು? ಎಂದು ಪ್ರತಿಭಾ ಕುಳಾಯಿ ಪ್ರಶ್ನಿಸಿದರು.

ಜನಾರ್ದನ ಪೂಜಾರಿ ನಮ್ಮ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಕಂಡ ನಿಷ್ಕಲಂಕ ರಾಜಕಾರಣಿ. ಇವರ ಕಾಲು ಹಿಡಿಯುವುದಲ್ಲ ಅಧಿಕಾರಿಯಂತವರು ಪಾದ ತೊಳೆದರೂ ಪಾಪ ತಟ್ಟುವುದಿಲ್ಲ.

ಕೋಟಿ ಚೆನ್ನಯರ ಕಾರಣಿಕ ಏನೇನ್ನುವುದು ಅಧಿಕಾರಿ ವಿಷಯದಲ್ಲಿ ನಮಗೆಲ್ಲ ತಿಳಿದಿದೆ. ಯಾಕೆಂದರೆ ಕಾಲ್ ಕಟ್ ಆಗಿದೆ ಎಂದು ತಿಳಿದು ಹಿಂದಿನಿಂದ ಬಿಲ್ಲವ ಸಮುದಾಯ ಮತ್ತು ಕೋಟಿ ಚೆನ್ನಯರನ್ನು ಅವಹೇಳನ ಮಾಡಿರುವ ಅಧಿಕಾರಿಯ ಮುಖವಾಡ ತುಳುವರ ಮುಂದೆ ಕಳಚಿಬಿದ್ದಿದೆ.

ಕೋಟಿ ಚೆನ್ನಯರನ್ನು ಮತ್ತು ಬಿಲ್ಲವ ಸಮುದಾಯವನ್ನು ಅವಹೇಳನ ಮಾಡಿರುವ ಜಗದೀಶ್ ಅಧಿಕಾರಿ ಕೂಡಲೇ ಗರಡಿಗೆ ಬಂದು ತಪ್ಪುಕಾಣಿಕೆ ಸಲ್ಲಿಸಿ ತಮ್ಮ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದರು.

Comments are closed.