ಕರ್ನಾಟಕ

ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸ್ಫೋಟ; ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಯಡಿಯೂರಪ್ಪ ಘೋಷಣೆ

Pinterest LinkedIn Tumblr

ಬೆಂಗಳೂರು: ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೋಡು ಗ್ರಾಮದಲ್ಲಿ ನಡೆದ ದುರಂತದಲ್ಲಿ 5 ಜನ ಮೃತರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ಈಗಾಗಲೇ ಸಂಸದ ರಾಘವೇಂದ್ರ ಅವರು ಬೀಡು ಬಿಟ್ಟಿದ್ದಾರೆ. ಅಲ್ಲದೆ ನಮ್ಮ ಇಲಾಖೆಯ ಮುರುಗೇಶ್ ನಿರಾಣಿ ಕೂಡ ಸ್ಥಳದಲ್ಲಿದ್ದಾರೆ ಎಂದರು.

ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳವನ್ನು ಈಗಾಗಲೇ ತನಿಖೆಗೆ ಕಳುಹಿಸಿಕೊಟ್ಟಿದ್ದೇವೆ. ತನಿಖೆಯ ಬಳಿಕ ಪ್ರಾಥಮಿಕ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇನ್ನು ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಕೊಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಸಿಎಂ ಹೇಳಿದರು.

ಜಿಲ್ಲೆಯ ಇತರ ಭಾಗಗಳಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇವುಗಳನ್ನು ತಡೆಯಲು ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ 6 ಕಡೆಗಳಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿದ್ದೇವೆ. ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿ ಸೂಕ್ತ ಕ್ರಮ ಕೈಗೊಂಡು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದರು.

ಘಟನೆ ಸಂಬಂಧ ಕ್ರಷರ್ ಮಾಲೀಕ ಸುಧಾಕರ್ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ನಾಳೆ ಭೇಟಿ ನೀಡುವುದಾಗಿ ಸಿಎಂ ತಿಳಿಸಿದರು.

Comments are closed.