ಕರಾವಳಿ

ಶೀಘ್ರದಲ್ಲೇ ಹಳೆ ನೋಟು ಸ್ಥಗಿತ: “ಎಟಿಎಂ”ಗಳಲ್ಲಿ ಹೊಸ ನೋಟುಗಳನ್ನು ಹಾಕಲು ಬ್ಯಾಂಕ್‌ಗಳಿಗೆ ಸೂಚನೆ

Pinterest LinkedIn Tumblr

ಮಂಗಳೂರು ಜನವರಿ 22 : ಬ್ಯಾಂಕಿನ ದೈನಂದಿನ ಕಾರ್ಯಗಳಲ್ಲಿ ನಿರ್ಲಕ್ಷ್ಯ ವಹಿಸದೇ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಬ್ಯಾಂಕಿಂಗ್ ವ್ಯವಹಾರದಲ್ಲಿ ಆಗುವ ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾದ ಬಿ. ಮಹೇಶ್ ಅವರು ತಿಳಿಸಿದರು.

ಅವರು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ದಕ್ಷಿಣ ಕನ್ನಡ ಅಗ್ರನಿ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ನಗದು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕರಿಗೆ ಬ್ಯಾಂಕ್‍ಗಳು ಉತ್ತಮ ಸೇವೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಾಳಜಿಯಿಂದ ಕೈಗೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಅಪರಾಧಗಳನ್ನು ತಡೆಯಲು ಸಾಧ್ಯ ಎಂದರು.

ಬ್ಯಾಂಕ್‍ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ಅವುಗಳ ನಿರ್ವಹಣೆಗೆ ಅಗತ್ಯವಿರುವ ಅಗ್ನಿ ನಿರೋಧಕ ಸಾಮಾಗ್ರಿಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳು ಅವುಗಳ ಬಳಕೆಯ ತಿಳುವಳಿಕೆ ಬಗ್ಗೆ ಅವಶ್ಯವಾಗಿ ತರಬೇತಿ ಹೊಂದಿರಬೇಕು ಎಂದರು.

ಬ್ಯಾಂಕ್ ಹಾಗೂ ಎ.ಟಿ.ಎಂ. ನ ಹೊರ ಹಾಗೂ ಒಳಭಾಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ಕ್ಯಾಮರಾ ಗಳನ್ನು ಅಳವಡಿಸಬೇಕು. ಇದರಿಂದ ಅಪರಾಧಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದರು.

ಎಟಿಎಂ ಗಳಲ್ಲಿ ಸಾಧ್ಯವಾದಷ್ಟು ಹೊಸ ನೋಟುಗಳನ್ನು ಬ್ಯಾಂಕ್‍ನವರು ಹಾಕಬೇಕು, ಕಡಿಮೆ ಮೊತ್ತದ 10 ರೂ, 20 ರೂ, 50 ರೂ. ಗಳನ್ನು ಎಟಿಎಂ ನಲ್ಲಿ ಹಾಕಲು ತಾಂತ್ರಿಕ ತೊಂದರೆ ಇದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಸಾರ್ವಜನಿಕರು 10 ರೂ ನಾಣ್ಯಗಳ ಬಳಕೆಯು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿರುತ್ತಿದೆ. ಜನ ಸಾಮಾನ್ಯರಿಗೆ ಈ ನಾಣ್ಯವೂ ಚಲವಣೆಯಲ್ಲಿದೆ ಎಂಬ ಬಗ್ಗೆ ತಿಳಿಸಬೇಕು ಎಂದ ಅವರು ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಸರ್ಕಾರದ ಕರ ವಸೂಲಿ ಸೇರಿದಂತೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳಲ್ಲಿ ಕಂಡಕ್ಟರ್‍ಗಳು ಅವುಗಳ ಬಳಕೆ ಮಾಡುವುದನ್ನು ನಿರ್ದೇಶನ ನೀಡಲು ತಿಳಿಸುವುದಾಗಿ ಹೇಳಿದರು.

ಪೊಲೀಸ್ ಕಮಿಷನರ್ ಶಶಿ ಕುಮಾರ್.ಎನ್ ಮಾತನಾಡಿ, ಹೊರ ಜಿಲ್ಲೆಗಳಿಂದ ಬ್ಯಾಂಕ್‍ಗಳಿಗೆ ಹಣವನ್ನು ತರುವಾಗ ಬ್ಯಾಂಕ್‍ಗಳು ಸಮನ್ವಯದೊಂದಿಗೆ ಒಟ್ಟಿಗೆ ತಂದಾಗ ಹೆಚ್ಚಿನ ಭದ್ರತೆ ಇರುತ್ತದೆ. ಜೊತೆಗೆ ನಮ್ಮ ಇಲಾಖೆ ವತಿಯಿಂದ ಭದ್ರತೆ ನೀಡಲಾಗುವುದು ಎಂದರು.

ಎ.ಟಿ.ಎಂ. ಗಳಲ್ಲಿ ಹಣವನ್ನು ತುಂಬಲು ಉತ್ತಮ ಏಜೆನ್ಸಿಗೆ ನೀಡಿದ್ದರೂ ಸಹ ಅದರ ಕೆಲವು ಸಿಬ್ಬಂದಿಗಳು ಹಾಗೂ ವಾಹನ ಚಾಲಕರು ಹಣದ ವ್ಯಾಮೋಹದಿಂದ ಕಳವು ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳಲ್ಲಿ ಅಪರಾಧಗಳನ್ನು ಶೀಘ್ರವಾಗಿ ಹಾಗೂ ನಿಖರವಾಗಿ ಪತ್ತೆಹಚ್ಚಲು ಅನುಕೂಲವಾಗಲು ಬ್ಯಾಂಕ್‍ಗಳು ಪೊಲೀಸ್‍ಗಳೊಂದಿಗೆ ತನಿಖೆಗೆ ಸಹಕರಿಸಲು ಲೇಸನಿಂಗ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದರು.

ಕೆಲವೊಮ್ಮೆ ಬ್ಯಾಂಕಿಂಗ್ ಅಪರಾಧಗಳಲ್ಲಿ ತನಿಖೆ ನಡೆಸುವಾಗ ಸಿಸಿಟಿವಿಗಳು ಕಾರ್ಯನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಬ್ಯಾಂಕ್‍ನ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲಿಸಿ ಅದರ ಬಗ್ಗೆ ಗಮನ ಹರಿಸಬೇಕು ಎಂದರು.

ಸಭೆಯಲ್ಲಿ ಕೆನರಾ ಬ್ಯಾಂಕ್‍ನ ಸಹಾಯಕ ಮುಖ್ಯ ವ್ಯವಸ್ಥಾಪಕ ರಾಬರ್ಟ್.ಡಿ.ಸಿಲ್ವಾ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಜುಲ್ಫಿಕರ್ ನವಾಜ್, ಲೀಡ್ ಬ್ಯಾಂಕ್‍ನ ಮುಖ್ಯ ಕಾರ್ಯದರ್ಶಿ ಪ್ರವೀಣ್ ಎಂ.ಬಿ, ಬ್ಯಾಂಕ್ ಕೋ-ಆರ್ಡಿನೇಟರ್, ಬ್ಯಾಂಕ್ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.