ಕರಾವಳಿ

ಯಾವುದೇ ಜಾತಿಗೆ ಸೀಮಿತವಾಗಿರದೆ ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿದ್ದವರು ಅಂಬಿಗರ ಚೌಡಯ್ಯರು: ಶಾಸಕ ಭರತ್ ಶೆಟ್ಟಿ

Pinterest LinkedIn Tumblr

ಮಂಗಳೂರು, ಜನವರಿ 22 : ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡುವುದರ ಜೊತೆಯಲ್ಲಿ ಅಸ್ಪ್ರಶ್ಯತೆಯನ್ನು ಹೋಗಲಾಡಿಸಲು ಅಂಬಿಗರ ಚೌಡಯ್ಯನವರು ಸದಾ ಹೋರಾಡಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನಕ್ಕಿಂತ ಮೊದಲು ಅನೇಕ ವಚನಕಾರರು ತಮ್ಮ ವಚನಗಳ ಮೂಲಕ ಜಾತಿ-ಭೇದ-ಮತವನ್ನು ದೂರವಾಗಿಸಿ ಸಮಾನತೆಯನ್ನು ತರುವಲ್ಲಿ ಶ್ರಮಿಸಿದ್ದಾರೆ. ಅವರಲ್ಲಿ ಅಂಬಿಗರ ಚೌಡಯ್ಯ ಕೂಡ ಒಬ್ಬರು. ಅಂಬಿಗರ ಚೌಡಯ್ಯ ಅವರು ಯಾವುದೇ ಜಾತಿಗೆ ಸೀಮಿತವಾಗಿರದೆ, ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿದ್ದರು ಎಂದರು.

ಬಾಲ್ಯದಲ್ಲಿಯೇ ಮಕ್ಕಳಿಗೆ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವರು ಭವಿಷ್ಯದಲ್ಲಿ ತಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ, ಲೇಖನಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಜನಸಾಮಾನ್ಯರಿಗೆ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಅಂಬಿಗರ ಚೌಡಯ್ಯ ಅವರ ಸಾಧನೆ ಅಪಾರವಾದುದು. ವೇಮನರ ಸರಳತೆ, ಜೀವನ ಶೈಲಿ, ಆಚಾರ-ವಿಚಾರ, ಚಿಂತನೆಗಳು, ಸಾಮಾಜಕ್ಕೆ ಅಮೂಲ್ಯ ಕೊಡುಗೆಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರು ಭರತ್ ಕುಮಾರ್ ಎರ್ಮಾಳ್, ಮುಲ್ಕಿ-ಮಂಗಳೂರು ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸೇವಾ ಸಂಘ ಸಂಯೋಜಕರಾದ ಪ್ರಭು ಅಲ್ಲೂರು, ಜಿಲ್ಲಾ ನಗರಾಭಿವೃದ್ಧಿ ಕೋಶಾ ಯೋಜನಾ ನಿರ್ದೇಶಕರಾದ ಗಾಯತ್ರಿ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜೆ ನಿರೂಪಿಸಿದರು.

Comments are closed.