ಕರ್ನಾಟಕ

ಗೋಹತ್ಯೆ ನಿಷೇಧಕ್ಕೆ ಸರ್ಕಾರ ಸಿದ್ಧ: 6 ತಿಂಗಳ ಬಳಿಕ ಗಂಡುಕರುಗಳ ಸ್ವೀಕಾರ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆಗೆ ಸಂಬಂಧಿಸಿದ ಸುಗ್ರೀವಾಜ್ಞೆ ಜಾರಿಗೆ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸುಗ್ರೀವಾಜ್ಞೆ ಜಾರಿ ಬಳಿಕ ಸಾಕಲಾಗದ ಹಾಗೂ ವಯಸ್ಸಾದ ಹಸುಗಳನ್ನು ಹತ್ತಿರದ ಗೋಶಾಲೆಗೆ ನೀಡುವಂತೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ರಾಜ್ಯದ ರೈತರಲ್ಲಿ ಮನವಿ ಮಾಡಿದ್ದಾರೆ

ಗೋಶಾಲೆಗಳ ಸಾಮರ್ಥ್ಯ ಹೆಚ್ಚಳ : ರಾಜ್ಯದಲ್ಲಿ 159 ಗೋಶಾಲೆಗಳಿದ್ದು ಅವುಗಳಲ್ಲಿ 75ಕ್ಕೂ ಹೆಚ್ಚು ಗೋಶಾಲೆಗಳಿಗೆ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈಗಿರುವ ಎಲ್ಲ ಗೋಶಾಲೆಗಳಲ್ಲಿ ಗೋವುಗಳ ಸಾಕಣೆಯ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಲಾಗಿದೆ. ಗೋವು ಸಾಕಲು ಆಗದವರು ಜಾನುವಾರುಗಳನ್ನು ಗೋಶಾಲೆಗಳಿಗೆ ಬಿಡಲು ಮುಂದಾದರೆ ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಹೊಸದಾಗಿ ಗೋಶಾಲೆ ಆರಂಭಿಸುವವರಿಗೆ ಇಲಾಖೆ ಹಾಗೂ ಸರ್ಕಾರದ ಕಡೆಯಿಂದ ಪೋ›ತ್ಸಾಹ ನೀಡುತ್ತೇವೆ ಎಂದು ಚವ್ಹಾಣ್ ತಿಳಿಸಿದ್ದಾರೆ.

ಗೋವುಗಳ ಸಂರಕ್ಷಣೆ ಕೇವಲ ಸರ್ಕಾರದ ಹೊಣೆ ಅಂತ ತಿಳಿಯದೇ ಸಾರ್ವಜನಿಕರು ಈ ಕಾರ್ಯದಲ್ಲಿ ಕೈ ಜೋಡಿಸಬಹುದು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಬೀಡಾಡಿ ದನಗಳ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹತ್ತಿರದ ಗೋಶಾಲೆಗಳಿಗೆ ದನಗಳನ್ನು ಸೇರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರೊಂದಿಗೆ ರ್ಚಚಿಸಿ ಸ್ಥಳೀಯವಾಗಿ ಹೊಸ ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಬೇಕು. ಅಲ್ಲಿ ಮೇವು, ನೀರು, ಚಿಕಿತ್ಸೆ ಹಾಗೂ ಬೀಡಾಡಿ ದನಗಳ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ. ರಸ್ತೆಯಲ್ಲಿ ಬೀಡಾಡಿ ಜಾನುವಾರು ಕಂಡುಬಂದಲ್ಲಿ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.

ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರೊಂದಿಗೆ ಸಹ ಸುದೀರ್ಘವಾಗಿ ಚರ್ಚೆ ಮಾಡಲಾಗಿದ್ದು ರಾಜ್ಯದೆಲ್ಲೆಡೆ ಅಕ್ರಮವಾಗಿ ನಡೆಯುವ ಗೋವುಗಳ ಸಾಗಾಟ, ವಧೆಯ ಬಗ್ಗೆ ನಿಗಾವಹಿಸಿ ಪಶುಸಂಗೋಪನೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಎಲ್ಲೆಡೆ ಹದ್ದಿನ ಕಣ್ಣಿಡಲು ತಿಳಿಸಲಾಗಿದೆ. ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆಗಳಿಗಾಗಿ ಸಾಗಾಣಿಕೆ ಮಾಡುವವರಿಗೆ ನೀಡಬೇಕಾದ ಅನುಮತಿ ಪತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಸುಗ್ರೀವಾಜ್ಞೆ ತರುವುದಾಗಿ ಸರ್ಕಾರ ತೀರ್ಮಾನ ಕೈಗೊಂಡ ಕೂಡಲೇ ವಿರೋಧ ಮಾಡುವುದು ವಿಪಕ್ಷ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಮಾಂಸ ತಿನ್ನುವವರ ಹಕ್ಕನ್ನು ಈ ಕಾಯ್ದೆಯ ಮೂಲಕ ಮೊಟಕು ಗೊಳಿಸುತ್ತಿಲ್ಲ. ಈ ಮಸೂದೆಯಲ್ಲೇ ತಿಳಿಸಿದಂತೆ 13 ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಕೈಬಿಡಲಾಗಿದೆ. ಆಹಾರದ ಹಕ್ಕನ್ನು ಈ ಕಾಯ್ದೆ ಕಸಿಯುತ್ತಿದೆ ಎಂಬ ಹೇಳಿಕೆಗಳು ನಿರಾಧಾರ. 2010ರಲ್ಲಿ ಇದೇ ಮಸೂದೆಯನ್ನು ಮಂಡಿಸಿದಾಗ ಎಮ್ಮೆ ಮತ್ತು ಕೋಣಗಳನ್ನು ಕೈಬಿಟ್ಟರೆ ಅಂಗೀಕರಿಸಬಹುದು ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೇ ಅಂಶಗಳು ಈಗಿನ ಮಸೂದೆಯಲ್ಲಿ ಪರಿಗಣನೆಗೆ ತೆಗೆದುಕೊಂಡರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್​ನ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಚಿವ ಪ್ರಭು ಚವ್ಹಾಣ್ ಅವರು ಟೀಕಿಸಿದ್ದಾರೆ.

Comments are closed.