ಕರ್ನಾಟಕ

ಆನ್‌ಲೈನ್‌ನಲ್ಲಿ ಊಟದ ಪಾರ್ಸೆಲ್‌ಗೆ ಆರ್ಡರ್‌ ಕೊಟ್ಟು 50 ಸಾವಿರ ಕಳೆದುಕೊಂಡ ಮಹಿಳೆ!

Pinterest LinkedIn Tumblr


ಬೆಂಗಳೂರು: ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಭರ್ಜರಿ ಊಟದ ಪಾರ್ಸೆಲ್‌ಗೆ ಆರ್ಡರ್‌ ಕೊಟ್ಟ 58 ವರ್ಷದ ಮಹಿಳೆಯೊಬ್ಬರು 50 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯಲಚೇನಹಳ್ಳಿ ನಿವಾಸಿ ಸವಿತಾ ಎನ್ನುವವರು ಈ ಮೋಸಕ್ಕೆ ಒಳಗಾಗಿದ್ದಾರೆ. ಸವಿತಾ ಅವರು ಫೇಸ್‌ಬುಕ್‌ ನೋಡುತ್ತಿರುವಾಗ ನಡುವೆ ಜಾಹೀರಾತು ಗಮನ ಸೆಳೆದಿದೆ. ಅದರಲ್ಲಿ 250 ರೂಪಾಯಿ ಕೊಟ್ಟು ಒಂದು ಥಾಲಿ (ಪ್ಲೇಟ್‌) ಊಟ ಆರ್ಡರ್‌ ಮಾಡಿದರೆ ಇನ್ನೊಂದು ಊಟ ಫ್ರೀ ಎಂದು ಬರೆಯಲಾಗಿತ್ತು. ಅಲ್ಲಿ ಕೊಟ್ಟಿರುವ ಚಿತ್ರದಲ್ಲಿನ ಬಗೆಬಗೆ ಭಕ್ಷ್ಯಗಳನ್ನು ಕಂಡಿರುವ ಸವಿತಾ ಅವರು, ತಾವ್ಯಾಕೆ ಆರ್ಡರ್‌ ಮಾಡಬಾರದು ಎಂದುಕೊಂಡರು. ಅದೂ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸದಾಶಿವನಗರ ವ್ಯಾಪ್ತಿಯ ಹೋಟೆಲ್‌ ವಿಳಾಸ ನೀಡಲಾಗಿತ್ತು.

ಸರಿ. ಸವಿತಾ ಅಲ್ಲಿ ಕೊಟ್ಟಿರುವ ನಂಬರ್‌ಗೆ ಕರೆ ಮಾಡಿದ್ದಾರೆ. ನಂತರ ಅವರು ಮೊದಲು 10 ರೂಪಾಯಿಯನ್ನು ಪಾವತಿಸಿ ಮುಂಗಡ ಬುಕ್‌ ಮಾಡಬೇಕು. 250 ರೂಪಾಯಿಗಳನ್ನು ಈಗಲೇ ಕೊಡಬೇಕೆಂದು ಇಲ್ಲ. ಊಟ ಬಂದ ಮೇಲೆ ಕೊಟ್ಟರೂ ಸಾಕು ಎಂದೆಲ್ಲಾ ತುಂಬಾ ಮೃದುವಾಗಿ ಮಾತನಾಡಿದ್ದಾರೆ.

ನಂತರ ಸವಿತಾ ಅವರು ತಮ್ಮ ಮೊಬೈಲ್‌ ನಂಬರ್‌ ಕೊಟ್ಟಿದ್ದಾರೆ. ಅದಕ್ಕೊಂದು ಲಿಂಕ್‌ ಕಳಹಿಸಲಾಗಿದೆ. ಆ ಲಿಂಕ್‌ ಕ್ಲಿಕ್‌ ಮಾಡಿ ಫಾರ್ಮ್‌ ಭರ್ತಿ ಮಾಡಿ ಎಂದು ಅಲ್ಲಿಂದ ಕರೆ ಮಾಡಿದವರು ಹೇಳಿದ್ದಾರೆ. ಅದರಂತೆ ಒಂದು ಲಿಂಕ್‌ ಬಂದಿದೆ.

ಅವರು ಹೇಳಿದಂತೆ ಡೆಬಿಟ್ ಕಾರ್ಡ್ ವಿವರಗಳು ಮತ್ತು ಪಿನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ! ಅಷ್ಟೇ… ಮುಂದಿನ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಲ್ಲಿದ್ದ 49,996 ರೂ ಮಂಗಮಾಯ!

ಊಟದ ಆರ್ಡರ್‌ ಬರುತ್ತದೆ ಎಂಬ ಮೆಸೇಜ್ ಬರುತ್ತದೆ ಎಂದು ಕಾಯುತ್ತಿದ್ದ ಸವಿತಾಗೆ ಬಂದದ್ದು ಬ್ಯಾಂಕ್‌ನಲ್ಲಿರುವ ಹಣ ವಿತ್‌ಡ್ರಾ ಆಗಿದ್ದು! ಆಗಲೇ ತಿಳಿದದ್ದು ಅವರಿಗೆ ತಾವು ಮೋಸ ಹೋಗಿದ್ದು! ಪೊಲೀಸರಲ್ಲಿ ದೂರು ದಾಖಲಿಸಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Comments are closed.