ಕರ್ನಾಟಕ

ಜನವರಿ 1ರಿಂದ 10 ಮತ್ತು 12ನೇ ತರಗತಿ ಆರಂಭಕ್ಕೆ ಸಿದ್ಧತೆ

Pinterest LinkedIn Tumblr


ಬೆಂಗಳೂರು: ಜನವರಿ 1ರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಮತ್ತೆ ಆರಂಭ ಮತ್ತು 6ರಿಂದ 9ನೇ ತರಗತಿವರೆಗೆ ‘ವಿದ್ಯಾಗಮ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿರುವುದರಿಂದ ಅಗತ್ಯ ಪೂರ್ವ ಸಿದ್ಧತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು (ಡಿ.ಸಿ) ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪತ್ರ ಬರೆದಿದ್ದಾರೆ.

ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ತರಗತಿ ಪುನರಾರಂಭ ಮತ್ತು ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದಿಂದ ಗ್ರಾಮ ಪಂಚಾಯಿತಿಗಳಿಗೆ ನೀಡಿದ ಥರ್ಮಲ್‌ ಸ್ಕ್ಯಾನರ್‌ಗಳನ್ನು ಶಾಲೆಗಳಿಗೆ ಪೂರೈಸಬೇಕು, ಕೊರತೆ ಉಂಟಾದರೆ ದಾನಿಗಳು ಮತ್ತು ಸಂಘ ಸಂಸ್ಥೆಗಳಿಂದ ಪಡೆಯಲು ಅಥವಾ ಶಾಲೆಗಳಲ್ಲಿರುವ ಲಭ್ಯ ಅನುದಾನದಿಂದ ಖರೀದಿಸಲು ಸೂಚನೆ ನೀಡಬೇಕು. ವಸತಿ ಶಾಲೆಗಳಲ್ಲಿ ಪೂರಕ ಎಸ್‌ಒಪಿಗಳೊಂಡಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಒದಗಿಸಲು ಸಾರಿಗೆ ಇಲಾಖೆ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಸನ್ನಿವೇಶ ಉದ್ಭವಿಸದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ‘ಉಸ್ತುವರಿ ಸಮಿತಿ’ ರಚಿಸಲಾಗಿದೆ. ಸಿಇಒ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ವರಿಷ್ಠಾಧಿಕಾರಿ. ಜಿಲ್ಲಾ ಆರೋಗ್ಯಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ ಸೇರಿ ಎಂಟು ಸದಸ್ಯರು ಸಮಿತಿಯಲ್ಲಿ ಇರಲಿದ್ದಾರೆ. ಶಿಕ್ಷಣ ಇಲಾಖೆಯ ಉಪ ನಿರ್ದೇಶರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಈ ಸಮಿತಿಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಸಚಿವರಿ‌ಗೆ ಮಾತು ವಾಪಸ್‌ ಪಡೆಯುವ ಕಾಯಿಲೆ ಇದ್ದಂತಿದೆ: ವಿಶ್ವನಾಥ್‌
ಮೈಸೂರು: ‘ಶಿಕ್ಷಣ ಸಚಿವ ಸುರೇಶ್‌ಕುಮಾರ್‌ಗೆ ಮಾತು ವಾಪಸ್‌ ಪಡೆಯುವ ಕಾಯಿಲೆ ಇದ್ದಂತಿದೆ. ಆದೇಶ ಮಾಡುತ್ತಾರೆ; ಅದನ್ನೇ ವಾಪಸ್ ಪಡೆಯುತ್ತಾರೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಗುರುವಾರ ಇಲ್ಲಿ ಟೀಕಿಸಿದರು.

‘ಸಚಿವ ಸುರೇಶ್‌ಕುಮಾರ್ ಹೇಳಿರುವ, ಯಾವುದಾದರೂ ಒಂದು ಕೆಲಸ ಆಗಿದೆಯಾ?’ ಎಂದು ಕೇಳಿದ ಅವರು, ‘ಕೊರೊನಾ ಎರಡನೇ ಅಲೆ ಜೋರಾಗಿದ್ದು, ಮಕ್ಕಳ ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಮಕ್ಕಳು ಮನೆಯ ಆಸ್ತಿ. ಪೋಷಕರನ್ನು ಆತಂಕಕ್ಕೀಡು ಮಾಡಬೇಡಿ. ಅಲ್ಲದೇ ಯಾರೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಯಾವುದೇ ಕಾರಣಕ್ಕೂ ಜ.1ರಿಂದ ಶಾಲೆ ಆರಂಭಿಸುವುದು ಬೇಡ’ ಎಂದರು.

ಕ್ಷಮೆ ಕೇಳಿ: ‘ನನ್ನ ನಂತರ ಬೇರೆ ಯಾರೂ ಮುಖ್ಯಮಂತ್ರಿಯಾಗಬಾರದು ಎಂಬ ಮನಸ್ಥಿತಿ ಸಿದ್ದರಾಮಯ್ಯ ಅವರದ್ದು. ಕಾಂಗ್ರೆಸ್ಸಿಗರು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದ ವಿಶ್ವನಾಥ್‌, ಕೊಡವರ ಬಗ್ಗೆ ನೀಡಿದ ಹೇಳಿಕೆಗೆ ಕ್ಷಮೆ ಕೇಳುವಂತೆ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

Comments are closed.