ಬೆಂಗಳೂರು: ಕಾಡುಗೋಡಿಯ ಕಾಶಿವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ಅವರ ಕೊಲೆ ಪ್ರಕರಣ ಸಂಬಂಧ ಇತರೆ ಮೂವರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದು, ಕೊಲೆಗೈದ ದುಷ್ಕರ್ಮಿಗಳು ಒಂದು ದಿನಗಳ ಕಾಲ ಮೃತ ಶವ ಇಟ್ಟುಕೊಂಡೆ ವ್ಯಾಪಾರ ಮಾಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಪ್ರಕರಣದ ಮಾಸ್ಟರ್ ಮೈಂಡ್ ಮಂಜುನಾಥ್‌ನ ನಾಲ್ವರು ಸಹಚರರನ್ನು ಬಂಧಿಸಲಾಗಿದೆ. ಆರೋಪಿಗಳು ಸೆ.5ರಂದು ದೀಕ್ಷಿತ್ ಅವರನ್ನು ಹಾರ್ಡ್‌ವೇರ್ ಶಾಪ್‌ನ ಗೋಡೌನ್‌ನಲ್ಲಿ ಕೊಲೆಗೈದು ಆ ಬಳಿಕ ದುಷ್ಕರ್ಮಿಗಳು, ಸುಮಾರು 28 ಗಂಟೆಗಳ ಕಾಲ ಗೋಡೌನ್‌ನಲ್ಲಿಯೇ ಶವವನ್ನು ಅಲ್ಯೂಮಿನಿಯಂ ಕಂಟೇನರ್‌ನಲ್ಲಿ ಇಟ್ಟಿದ್ದರು. ಸೆ.6ರಂದು ರಾತ್ರಿ ಎಂಟು ಗಂಟೆವರೆಗೂ ವ್ಯಾಪಾರ ಮಾಡಿ ಅಂಗಡಿ ಮುಚ್ಚಿದ್ದರು. ಬಳಿಕ ತಡರಾತ್ರಿ 12 ಗಂಟೆ ಸುಮಾರಿಗೆ ತನ್ನ ಎಲ್ಲ ಸಹಚರರನ್ನು ಕರೆತಂದು ಕಾರಿನಲ್ಲಿ ಶವವನ್ನು ಹೊತೊಯ್ದು ಕಸ ವಿಂಗಡಣೆ ಘಟಕದ ಪಾಯದಲ್ಲಿ ಹೂತು ಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲೇವಾದೇವಿ ವ್ಯವಾಹರವೇ ಮುಳುವಾಯಿತಾ?
ಅರ್ಚಕ ದೀಕ್ಷಿತ್ ಅವರು ಕೆಲ ವರ್ಷಗಳ ಹಿಂದೆ ಕಾಡುಗೋಡಿಯಲ್ಲಿ ತಮ್ಮ ಜಮೀನು ಮಾರಾಟ ಮಾಡಿದ್ದರು. ಈ ಹಣದಿಂದಲೇ ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು. ಇದೇ ಅವರ ಪ್ರಾಣಕ್ಕೆ ಮುಳುವಾಗಿದೆ ಎಂದು ಹೇಳಲಾಗಿದೆ. ಮತ್ತೂಂದೆಡೆ ಡಿ.5ರಂದು ಮನೆಯಿಂದ ಬೈಕ್‌ನಲ್ಲಿ ಹೊರಟ ದೀಕ್ಷಿತ್ ಅವರು, ಕಾಡುಗೋಡಿಯ ಯಲ್ಲಪ್ಪ ರೆಡ್ಡಿ ವೃತ್ತದವರೆಗೆ ಮಾತ್ರ ಹೋಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸೆರೆಯಾಗಿವೆ. ಹೀಗಾಗಿ ಇಲ್ಲಿಯೇ ಅವರು ನಾಪತ್ತೆಯಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೂ ಪ್ರಕರಣದಲ್ಲಿ ಅವರ ಜತೆ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆರೋಪಿ ಕೂಡ ಸುಳ್ಳು ಹೇಳಿಕೆ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬರಲು ವಿಳಂಬವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.