ಕರ್ನಾಟಕ

ಬಿಜೆಪಿ- ಜೆಡಿಎಸ್​ ವಿಲೀನದ ಕುರಿತು ಯಡಿಯೂರಪ್ಪ ಹೇಳುವುದೇನು?

Pinterest LinkedIn Tumblr


ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್‌ ವಿಲೀನದ ಕುರಿತು ಸಾಕಷ್ಟು ಸುದ್ದಿ ಹರಡಿದೆ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡುವುದು, ಕ್ಷೇತ್ರದ ಅಭಿವೃದ್ಧಿಗೆ ಅಚ್ಚರಿ ಮೂಡಿಸುವಷ್ಟು ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು, ಕಾಂಗ್ರೆಸ್ ಅನ್ನು ಕಟುವಾಗಿ ವಿರೋಧಿಸುವ ಮೂಲಕ ಬಿಜೆಪಿ ಜತೆ ಬಾಂಧವ್ಯ ಬೆಳೆಸುತ್ತಿರುವುದು ಇವೆಲ್ಲಾ ಬೆಳವಣಿಗೆಗಳ ನಂತರ ಈ ಎರಡೂ ಪಕ್ಷಗಳು ವಿಲೀನ ಆಗುತ್ತಿರುವ ಶಂಕೆ ಎಲ್ಲೆಡೆ ಹರಿದಾಡುತ್ತಿದೆ.

ಮಾತ್ರವಲ್ಲದೇ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಖುದ್ದು ಪ್ರಧಾನ ಮಂತ್ರಿಯೇ ಶುಭ ಹಾರೈಸಿರುವುದು ಅಚ್ಚರಿ ಮೂಡಿಸಿದೆ. ಜತೆಗೆ ಕೇಂದ್ರದ ಮೂವರು ಸಚಿವರು, ಸಂಸದರು, ರಾಜ್ಯದ 8 ಸಚಿವರು ಶುಭ ಕೋರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಜತೆಗೆ, ಭೂ ತಿದ್ದುಪಡಿ ಮಸೂದೆ ವಿಚಾರದಲ್ಲಿ, ಪರಿಷತ್‌ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ಸಂದರ್ಭದಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ನೀಡಿತ್ತು. ಈ ಕಾರಣದಿಂದ ಬಿಜೆಪಿ ಜತೆ ಜೆಡಿಎಸ್‌ ವಿಲೀನವಾಗುವ ಬಗ್ಗೆ ವದಂತಿಗಳು ಎದ್ದಿದ್ದವು.

ಆದರೆ ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಹೇಳಿಕೆಯೊಂದನ್ನು ನೀಡಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಎರಡೂ ಪಕ್ಷಗಳು ವಿಲೀನ ಆಗುವಂಥ ಯಾವುದೇ ಸಂದರ್ಭ ಬಂದಿಲ್ಲ. ಯಾವುದೇ ಜೆಡಿಎಸ್ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾಗಲೀ ಅಥವಾ ಜೆಡಿಎಸ್‌ನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವಂಹ ಗೊಂದಲಗಳ ವರದಿಗಳು ಶುದ್ಧ ಸುಳ್ಳು. ಅಂತಹ ಯಾವುದೇ ಸಂದರ್ಭ ಬಂದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಯಡಿಯೂರಪ್ಪನವರು, ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ವಿಧಾನ ಪರಿಷತ್ ಸಭಾಪತಿಗಳ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಅಷ್ಟೇ. ಆದ್ದರಿಂದ ಪರಿಷತ್ ಸಭಾಪತಿ ವಿಚಾರದಲ್ಲಿ ಮಾತ್ರ ನಮಗೆ ಸಹಕಾರ ನೀಡುತ್ತಿದ್ದಾರೆಯೇ ವಿನಾ ಮತ್ತೇನೂ ಇಲ್ಲ ಎಂದಿದ್ದಾರೆ.

ಗೋಹತ್ಯೆ ನಿಷೇಧದ ಬಗ್ಗೆ ನಮ್ಮ ಬೆಂಬಲವಿಲ್ಲ ಎಂದು ಸಹ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದರಿಂದ ನಾವು ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿಗೆ ತರುತ್ತಿದ್ದೇವೆ. ಇನ್ನು ವಿಧಾನಸಭೆಗೆ ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಈಗ ಮಾಧ್ಯಮಗಳಲ್ಲಿ ಬರುತ್ತಿರುವ ಬಿಜೆಪಿ ಜತೆ ಜೆಡಿಎಸ್ ವಿಲೀನ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Comments are closed.