ಕರ್ನಾಟಕ

ಗ್ರಾಮ ಪಂಚಾಯತ್ ಗೆ ಹೆಂಡತಿ ಅವಿರೋಧ ಆಯ್ಕೆ: ಪತಿ ಆತ್ಮಹತ್ಯೆ

Pinterest LinkedIn Tumblr


ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಂಡತಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲ್ಲೂಕಿನ ದೊಡ್ಡರಾಯಪೇಟೆಯಲ್ಲಿ ವರದಿಯಾಗಿದೆ.

ದೊಡ್ಡರಾಯಪೇಟೆಯ ನಿವಾಸಿ ಬಸವರಾಜು ಎಂಬುವವರ ಮಗ ‌ನಿಂಗರಾಜು (27) ಆತ್ಮಹತ್ಯೆ ಮಾಡಿಕೊಂಡವರು. ನಿಂಗರಾಜು ಅವರ ಪತ್ನಿ ಎಚ್‌.ಎಸ್‌. ಗಗನ ಅವರು ಈಗ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮದ ಎರಡನೇ ವಾರ್ಡ್‌ನಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.

ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು ಎಂದು ಹೇಳಲಾಗಿದೆ. ‘ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಈ ಬಗ್ಗೆ ನಿಂಗರಾಜುಗೆ ಬೇಸರ ಇತ್ತು. ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಅವರ ತಂದೆ ಬಸವರಾಜು ಅವರು ದೂರು ನೀಡಿದ್ದಾರೆ’ ಎಂದು ಪೂರ್ವ ಪೊಲೀಸ್‌ ಠಾಣೆ (ರಾಮಸಮುದ್ರ) ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ಅವರು ತಿಳಿಸಿದರು.

ಕೂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದೊಡ್ಡರಾಯಪೇಟೆ ಗ್ರಾಮದ 2ನೇ ವಾರ್ಡ್‌ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾಗಿದೆ. ಈ ವಾರ್ಡ್‌ನಿಂದ ನಿಂಗರಾಜು ಪತ್ನಿ ಎಚ್‌.ಎಸ್‌.ಗಗನ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಮಂಗಳವಾರ ದಂಪತಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಭೇಟಿ ಮಾಡಿದ್ದರು. ಶಾಸಕರು ಗಗನ ಅವರನ್ನು ಅಭಿನಂದಿಸಿದ್ದರು.

ಪತ್ನಿ ಆಯ್ಕೆಯಾಗಿದ್ದಕ್ಕೆ ಸಂಭ್ರಮ ಪಟ್ಟಿದ್ದ ನಿಂಗರಾಜು ಅವರು ಮಂಗಳವಾರ ಸಂಜೆ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದರು ಎನ್ನಲಾಗಿದೆ. ರಾತ್ರಿ ಮನೆಗೆ ಹೋದ ನಂತರ ನೇಣು ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿ‌ತಾದರೂ, ಆ ವೇಳೆಗಾಗಲೇ ಮೃತಪಟ್ಟಿದ್ದರು.

‘ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ಅವರು ಹೇಳಿದರು.

Comments are closed.