ಕರ್ನಾಟಕ

ಇಂದು ಭಾರತೀಯ ವೈದ್ಯಕೀಯ ಸಂಘದಿಂದ ಬಂದ್​ಗೆ ಕರೆ: ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್?

Pinterest LinkedIn Tumblr


ಬೆಂಗಳೂರು: ರೈತರು, ಸಾರಿಗೆ ನೌಕರರ ಪ್ರತಿಭಟನೆಗಳ ಜೊತೆಗೆ ಈಗ ವೈದ್ಯರ ಮುಷ್ಕರವೂ ಸೇರ್ಪಡೆಯಾಗಿದೆ. ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್​​ಗೆ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ.

ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಕಳೆದ ಕೆಲವು ದಿನಗಳಿಂದ ರೈತರ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಇಂದು ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಲ್ನಡಿಗೆ ಜಾಥಾ ಹೊರಟಿದ್ದಾರೆ. ಇದರ ನಡುವೆ ನಾಳೆ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಮುಷ್ಕರ ಇದೆ. ಹೀಗಾಗಿ ನಾಳೆ ಖಾಸಗಿ ಆಸ್ಪತ್ರೆಗಳ ಒಪಿಡಿ ತೆರೆಯುವುದು ಬಹುತೇಕ ಅನುಮಾನವೇ ಆಗಿದೆ.

ಬೆಳಗ್ಗೆ 6 ರಿಂದ‌ ಸಂಜೆ 6ರವರಗೆ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್​ಗಳನ್ನು ಮುಚ್ಚಲು ಭಾರತೀಯ ವೈದ್ಯಕೀಯ ಸಂಘ ಸೂಚನೆ ನೀಡಿದೆ ಎನ್ನಲಾಗಿದೆ. ವೈದ್ಯರ ಈ ಮುಷ್ಕರ ಯಾಕೆಂದರೆ, ಕೇಂದ್ರ ಸರ್ಕಾರದ‌ ಹೊಸ ನಿಯಮಗಳಂತೆ ಇನ್ಮುಂದೆ ಆಯುಷ್ ವೈದ್ಯರಿಗೆ ಶಸ್ತ್ರಚಿಕಿತ್ಸೆ ತರಬೇತಿ ‌ನೀಡಲಾಗುತ್ತದೆ. ಇದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದಿಂದ‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಆಲೋಪತಿ ವೈದ್ಯರು ಮತ್ತು ಕ್ಲಿನಿಕ್​ಗಳ ವೈದ್ಯರು ಮಾತ್ರ ಈ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರದ ನೋಟಿಫಿಕೇಶನ್​​ನಲ್ಲಿ ಈ ವರ್ಷದ ಪಿಜಿ ಕೋರ್ಸ್ ಗಳಲ್ಲಿ ಸರ್ಜರಿ ತರಬೇತಿ ಇರಲಿದೆ. ಒಟ್ಟು 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿ ನೀಡಲಾಗುತ್ತದೆ. ಈ ನೋಟಿಫಿಕೇಶನ್​ನ್ನು ತಿದ್ದುಪಡಿ ಮಾಡುವಂತೆ ಐಎಂಎ(ಭಾತತೀಯ ವೈದ್ಯಕೀಯ ಸಂಘ) ಒತ್ತಡ ಹಾಕುತ್ತಿದೆ.

ಐಎಂಎ ಕರೆದಿರುವ ಬಂದ್ ಗೆ ಅನೇಕ ಆಸ್ಪತ್ರೆಗಳು ನೈತಿಕ ಬೆಂಬಲ ನೀಡವೆ. ಬಹುತೇಕ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಮಯ ಒಪಿಡಿ ಮುಚ್ಚಲಾಗಿತ್ತು. ಈಗ ವೈದ್ಯರನ್ನು ಭೇಟಿ ಮಾಡಲು ಮೊದಲೇ ರೋಗಿಗಳು ಅಪಾಯಿಂಟ್ಮೆಂಟ್ ತೆಗೆದುಕೊಂಡಿರುತ್ತಾರೆ ರೋಗಿಗಳನ್ನು ವಾಪಸ್ ಕಳಿಸಲು ಸಾಧ್ಯವಿಲ್ಲ. ಟೆಲಿ ಮೆಡಿಸಿನ್ ಮತ್ತು ಆನ್ ಲೈನ್ ಅಪಾಯಿಂಟ್ಮೆಂಟ್ ಬದಲಾಗೋದಿಲ್ಲ, ನಿಗದಿಯಂತೆ ನಡೆಯುತ್ತದೆ ಫೋರ್ಟಿಸ್, ಅಪೊಲೊ, ಎಂ ಎಸ್ ರಾಮಯ್ಯ, ಸಾಗರ್ ಆಸ್ಪತ್ರೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಯಾವುದೇ ಪ್ರತಿಭಟನೆ ಇರುವುದಿಲ್ಲ ಎಂದು ಐಎಂಎ ಕರ್ನಾಟಕ ವಿಭಾಗದ ಕಾರ್ಯದರ್ಶಿ ಡಾ ಪ್ರಸಾದ್ ತಿಳಿಸಿದ್ದಾರೆ.

Comments are closed.