ಕರ್ನಾಟಕ

ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರದು ಹೊಟ್ಟೆಪಾಡಿನ ರಾಜಕೀಯ: ಕುಮಾರಸ್ವಾಮಿ

Pinterest LinkedIn Tumblr


ಕೋಲಾರ: ‘ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರು ಡೋಂಗಿಗಳು. ಅವರದು ಹೊಟ್ಟೆ ಪಾಡಿನ ರಾಜಕೀಯ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತ ಮುಖಂಡರನ್ನು ಕಟುವಾಗಿ ಟೀಕಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ಭೂ ಸುಧಾರಣೆ ಕಾಯ್ದೆ ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತ ಮುಖಂಡರು ಮೊದಲು ತಮ್ಮ ಹುಳುಕು ಮುಚ್ಚಿಕೊಳ್ಳಲಿ. ಅವರ ಆಟ ನನ್ನ ಬಳಿ ನಡೆಯಲ್ಲ’ ಎಂದು ಗುಡುಗಿದರು.

‘ರೈತ ಮುಖಂಡರು ನನ್ನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಂದ ನಾನು ಪಾಠ ಕಲಿಯಬೇಕಿಲ್ಲ. ದೇವೇಗೌಡರು ಮತ್ತು ನಾನು ರಾಜಕೀಯ ಬಿಟ್ಟು ಹೋಗಬೇಕೆಂದು ಹೇಳಲು ಅವರ್‌್ಯಾರು? ಅವರಿಂದ ರಾಜಕೀಯಕ್ಕೆ ಬಂದಿದ್ದೇವಾ? ಆ ಚಿಲ್ಲರೆಗಳಿಗೆ ಉತ್ತರಿಸುವ ಅಗತ್ಯವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ದೇವೇಗೌಡರು ರೈತರಿಗೆ ಏನು ಅನ್ಯಾಯ ಮಾಡಿದ್ದಾರೆ? ಅವರು ರೈತರಿಗೆ ವಿಷ ಕೊಟ್ಟಿಲ್ಲ. ಕಾವೇರಿ ನದಿ ನೀರು ಉಳಿಸಿದ್ದು, 30 ಟಿಎಂಸಿ ಹೆಚ್ಚುವರಿ ನೀರು ಬಂದಿರುವುದು ದೇವೇಗೌಡರ ಹೋರಾಟದ ಫಲ. ರಾಜ್ಯಕ್ಕೆ ಹೆಚ್ಚುವರಿ ನೀರು ಬಂದದ್ದು ರೈತ ಮುಖಂಡರ ಹೋರಾಟದಿಂದಲ್ಲ’ ಎಂದು ಕಿಡಿಕಾರಿದರು.

ಚರ್ಚೆಗೆ ಬರಲಿ: ‘ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ತಿಂಗಳು ರೈತ ಮುಖಂಡರ ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸಿದ್ದೇನೆ. ಆದರೆ, ಈಗ ಜೆಡಿಎಸ್‌ ಪಕ್ಷ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಲಾಗುತ್ತಿದೆ. ಕೆಲ ಸಂಘಟನೆಗಳು ಮತ್ತು ವ್ಯಕ್ತಿಗಳು ಜೆಡಿಎಸ್‌ ಪಕ್ಷಕ್ಕೆ ರೈತ ವಿರೋಧಿ ಎಂಬ ಪಟ್ಟ ಕಟ್ಟಲು ಹೊರಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

’14 ತಿಂಗಳಲ್ಲಿ ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆಗ ರೈತ ಮುಖಂಡರು ನನ್ನ ಪರವಾಗಿ ಮಾತನಾಡಲಿಲ್ಲ. ಜೆಡಿಎಸ್‌ ರೈತರ ಪರವಾಗಿರುವ ಪಕ್ಷ. ರೈತ ಮುಖಂಡರು ಬೆಂಬಲ ಕೊಡದಿದ್ದರೂ ರೈತರ ಪರವಾಗಿ ಹೋರಾಟ ಮಾಡಿದೆ. ಪಕ್ಷ ಮುಂದೆಯೂ ರೈತರ ಪರವಾಗಿ ಇರುತ್ತದೆ. ಈ ವಿಚಾರವಾಗಿ ರೈತ ಮುಖಂಡರು ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

Comments are closed.