ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ನೂತನ ಕೃಷಿ ಕಾಯ್ದೆಗಳ ತಿದ್ದುಪಡಿ ಕರಡು ಮಸೂದೆಯನ್ನು ಪ್ರತಿಭಟನಾ ನಿರತ ರೈತರು ಸರ್ವಾನುಮತದಿಂದ ತಿರಸ್ಕರಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದ ರೈತರು ಹೋರಾಟವನ್ನು ತೀವ್ರಗೊಳಿಸಲು ನಿರ್ಧಾರ ಮಾಡಿದ್ದಾರೆ.
ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಒಪ್ಪದ ಹಿನ್ನೆಲೆ ಡಿ 14 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ ಡಿ. 12ರಂದು ದೆಹಲಿ ಗೆರಾವ್ ನಡೆಸಲಾಗುವುದು. ಈ ವೇಳೆ ಹೆದ್ದಾರಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ರಾಜಸ್ಥಾನ, ಉತ್ತರ ಪ್ರದೇಶದಿಂದ ದೆಹಲಿಗೆ ಬರುವ ಹೆದ್ದಾರಿಗಳು ಬಂದ್ ಮಾಡುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧಾರಿಸಲಾಗಿದೆ. ಅಲ್ಲದೇ ಟೋಲ್ ಪ್ಲಾಜಾಗಳನ್ನು ವಶಪಡಿಸಿಗೊಳ್ಳಲು ತೀರ್ಮಾನಿಸಲಾಗಿದೆ. ಡಿ. 14ರಂದು ದೇಶಾದ್ಯಂತ ಪೂರ್ಣ ಪ್ರಮಾಣದ ಪ್ರತಿಭಟನೆ ನಡೆಸಲಾಗುವುದು ಎಂದು ಸಿಂಘುಗಡಿಯಲ್ಲಿ ಸಭೆ ನಡೆಸಿದ ಬಳಿಕ ರೈತ ಮುಖಂಡರು ತಿಳಿಸಿದ್ದಾರೆ
ಕೇಂದ್ರದ ತಿದ್ದುಪಡಿ ಕರುಡು ಹಳೆಯ ಪ್ರಸ್ತಾಪಕ್ಕೆ ಹೊಸ ಉಡುಗೆ ತೊಡಿಸಿದಂತೆ ಇದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಟೀಕಿಸಿದೆ. ಮೋದಿ ಸರ್ಕಾರ ರೈತರ ಬೇಡಿಕೆಗಳನ್ನು ಪರಿಹರಿಸುವಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಿಲ್ಲ. ಹಳೆಯ ಪ್ರಸ್ತಾಪಗಳನ್ನು ಹೊಸದರಂತೆ ಬಿಂಬಿಸಿದೆ. ಎಲ್ಲಾ ರೈತ ಸಂಘಗಳು ಈ ಮೂರು ನೂತನ ಕೃಷಿ ಮಸೂದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸುತ್ತೇವೆ. ದೆಹಲಿಯಲ್ಲಿ ನಮ್ಮ ಪ್ರತಿಭಟನೆ ಮುಂದುವರೆಯಲಿದ್ದು ಎಲ್ಲಾ ರಾಜ್ಯಗಳ ಜಿಲ್ಲಾ ಮಟ್ಟದಲ್ಲಿ ಕೂಡ ಧರಣಿ ಪ್ರಾರಂಭಿಸಲಾಗುವುದು ಎಂದು ತಿಳಸಿದ್ದಾರೆ.
ಕರಡಿನಲ್ಲಿ ಹೊಸ ಕೃಷಿ ಕಾಯ್ದೆ ಬಗ್ಗೆ ಇರುವ ಅನುಮಾನಗಳಿಗೆ ಎಲ್ಲಾ ಸ್ಪಷ್ಟೀಕರಣ ನೀಡಲು ಸರ್ಕಾರ ಸಿದ್ಧವಾಗಿದೆ. ವಿವಿಧ ಪ್ರದೇಶದಲ್ಲಿನ ರೈತರ ಅನುಮಾನಗಳನ್ನು ಬಗೆಹರಿಸಲಾಗುವುದು ಎಂದು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನು ಕಾರ್ಪೋರೇಟರ್ಗಳು ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಹುದು ಎಂಬ ಪ್ರಸ್ತಾಪದ ಕುರಿತು ಕರಡಿನಲ್ಲಿ ಸ್ಪಷ್ಟನೆ ನೀಡಲಾಗಿದ್ದುಮ, ಯಾವುದೇ ಖರೀದಿದಾರರು ಕೃಷಿ ಭೂಮಿಯ ಮೇಲೆ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ ಅಥವಾ ಆ ರೀತಿಯ ಷರತ್ತನ್ನು ವಿಧಿಸಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು ಮಂಡಿಗಳ ಹೊರಗೆ ಕಾರ್ಯನಿರ್ವಹಿಸುವ ವ್ಯಾಪಾರಿಗಳನ್ನು ನೊಂದಾಯಿಸಲು ತಿದ್ದುಪಡಿ ಮಾಡಬಹುದು, ರಾಜ್ಯಗಳು ಎಪಿಎಂಸಿ ಬಳಕೆ ಮಾಡಿದಂತೆ ಅದರ ಆಧಾರದ ಮೇಲೆ ತೆರಿಗೆ ಸೆಸ್ ವಿಧಿಸಬಹುದು ಎಂದು ತಿಳಿಸಲಾಗಿದೆ.