ಕರ್ನಾಟಕ

ಗ್ರಾಮಪಂಚಾಯಿತಿ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ಅಧಿಸೂಚನೆ ಹೊರ ಬೀಳಲಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆಯೂ ಆರಂಭವಾಗಲಿದೆ. ರಾಜ್ಯದ 5,762 ಗ್ರಾಮಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಇದೀಗ ರಾಜ್ಯದ 27 ಗ್ರಾಮ ಪಂಚಾಯತಿಗಳನ್ನು ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

ರಾಜ್ಯದ 27 ಗ್ರಾಮಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಲು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಹೀಗಾಗಿ ಚುನಾವಣೆ ಆಯೋಗ ತನ್ನ ಹೊಸ ಸೂಚನೆಯಲ್ಲಿ ವಿವಿಧ ಜಿಲ್ಲೆಗಳ 27 ಗ್ರಾಮ ಪಂಚಾಯಿತಿಗಳನ್ನು ಚುನಾವಣೆ ಪ್ರಕ್ರಿಯೆಯಿಂದ ಕೈಬಿಟ್ಟಿದೆ.

ರಾಜ್ಯ ಗ್ರಾಮಪಂಚಾಯಿತಿ ಚುನಾವಣೆ ಡಿಸೆಂಬರ್ 22 ಮತ್ತು 27 ರಂದು 2 ಹಂತಗಳಲ್ಲಿ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 113 ತಾಲೂಕುಗಳ 2,930 ಗ್ರಾಮಪಂಚಾಯತ್ ಗಳು ಹಾಗೂ ಎರಡನೇ ಹಂತದಲ್ಲಿ 113 ತಾಲೂಕುಗಳ 2,832 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದ ‌ಮತದಾನ ಡಿ. 22ರಂದು ನಡೆಯಲಿದ್ದು ಅಧಿಸೂಚನೆ ಡಿ. 7 ರಂದು ಪ್ರಕಟವಾಗಲಿದೆ. ಡಿ.11ರಂದು ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು. ಡಿ.14ರಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ.

ಎರಡನೇ ಹಂತದ ಚುನಾವಣೆ ಡಿ.27 ರಂದು ನಡೆಯಲಿದ್ದು ಡಿ.11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಡಿ. 19 ರಂದು ನಾಮಪತ್ರ ಪಡೆಯಲು ಕೊನೆ ದಿನಾಂಕವಾಗಿದೆ.

Comments are closed.