ಕರ್ನಾಟಕ

ಹಿಂದೂ ಮುಸ್ಲಿಂ ಕ್ರಾಸ್​ ಆಗಿ ಬಹಳ ಜನ ಹುಟ್ಟಿದ್ದಾರೆ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು : ರಾಜ್ಯದಲ್ಲಿ ತರಲು ನಿರ್ಧರಿಸಿರುವ ಲವ್​ ಜಿಹಾದ್​ ನಿಷೇಧ ಕಾಯ್ದೆಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಹಿಂದೂ ಮುಸ್ಲಿಂ ಕ್ರಾಸ್​ ಆಗಿ ಬಹಳ ಜನ ಹುಟ್ಟಿದ್ದಾರೆ ಎನ್ನುವ ಹೇಳಿಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.

ಬೆಂಗಳೂರಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಲವ್​ ಜಿಹಾದ್​ ನಿಷೇಧ ವಿಚಾರಕ್ಕೆ ಗರಂ ಆಗಿದ್ದಾರೆ. ಮದುವೆ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವಯಕ್ತಿಕ ವಿಚಾರ ಇಂತವರನ್ನೇ ಮದುವೆಯಾಗಿ ಎನ್ನುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಮುಸ್ಲಿಂ ಕ್ರಾಸ್​ ಆಗಿ ಬಹಳ ಜನ ಹುಟ್ಟಿದ್ದಾರೆ, ಮದುವೆ ಅನ್ನುವುದು ಅವರವರ ವಯಕ್ತಿಕ ನಿರ್ಧಾರ ಮತ್ತು ಅಭಿಪ್ರಾಯ, ಇಂತವರನ್ನೇ ಮದುವೆಯಾಗಿ ಎಂದು ಹೇಳಲು ಸಾಧ್ಯವಿಲ್ಲ. ಅಲಹಬಾದ್​ ಹೈಕೋರ್ಟ್​ ಮತ್ತು ಕರ್ನಾಟಕ ಹೈಕೋರ್ಟ್​ ಈ ಮಾತನ್ನೇ ಹೇಳಿದೆ. ರಾಜಕೀಯ ದುರುದ್ದೇಶದಿಂದ ಮತ್ತು ಜನರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಬಿಜೆಪಿ ಈ ಕಾನೂನನ್ನು ಜಾರಿ ಮಾಡಲು ಹೊರಟಿದೆ. ಲವ್​ ಜಿಹಾದ್​ ಕಾನೂನು ಜಾರಿಗೆ ತರಲು ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಒಂದು ವರ್ಗದವರ ಒಲೈಕೆಗಾಗಿ ಈ ರೀತಿಯ ಹೇಳಿಕೆ ಸರಿಯಲ್ಲ, ಅನೇಕ ಮುಸಲ್ಮಾನರು ನಮ್ಮ ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗಿ ನಡುನೀರಿನಲ್ಲಿ ಕೈಬಿಟ್ಟ ಉದಾಹರಣೆಗಳಿವೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ , ಇಂತಹಾ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಮತ್ತು ಈ ರೀತಿ ಮಾತನಾಡುವುದು ಒಬ್ಬ ನಾಯಕನಿಗೆ ಶೋಭೆ ತರುವಂತದಲ್ಲ. ಒಂದು ವರ್ಗದ ಜನರ ಓಲೈಕೆಗಾಗಿ ಈ ರೀತಿ ಮಾತನಾಡಬಾರದು ಎಂದರು.

ಗ್ರಾಮೀಣಾಭಿವೃದ್ದಿ ಸಚಿವರಾದ ಕೆ.ಎಸ್​ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯನವರೇ ನೀವು ಮುಸಲ್ಮಾನರನ್ನು ಸಂತೃಪ್ತಿ ಪಡಿಸಿದ್ದು ಸಾಕು. ಸಿದ್ದರಾಮಯ್ಯ ಈ ರೀತಿಯ ಮೂರ್ಖತನದ ಮಾತುಗಳನ್ನಾಡಬಾರದು, ಈ ರೀತಿಯ ಬಾಲಿಶ ಹೇಳಿಕೆಗಾಗಿ ಸಿದ್ದರಾಮಯ್ಯ ರಾಜ್ಯದ ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಲವ್​ ಜಿಹಾದ್​ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆ ತೀವ್ರ್ ಸಂಚಲನವನ್ನು ಉಂಟು ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿದೆ.

Comments are closed.