ಬಾಗಲಕೋಟೆ: ನಾವು ಕಾಂಗ್ರೆಸ್‌ನಿಂದ ಬಿಜೆಪಿ ಸೇರುವ ಸಮಯದಲ್ಲಿ ಮುಂಬಯಿಗೆ ತೆರಳಬೇಕಿದ್ದ ನಮ್ಮನ್ನು ವಿಮಾನ ಹತ್ತಿಸಿದ್ದು ಸಚಿವ ಆರ್. ಅಶೋಕ್ ಅವರೇ ಹೊರತು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಆತ್ಮಹತ್ಯೆ ಯತ್ನ ಕುರಿತು ಡಿ.ಕೆ. ಶಿವಕುಮಾರ್ ಬಳಿ ಸಿ.ಡಿ., ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ. ಅಂಥದ್ದೇನಾದರೂ ಇದ್ದರೆ ಯಾವಾಗಲೋ ಬಿಡುಗಡೆ ಮಾಡುತ್ತಿದ್ದರು ಎಂದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಅವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರು ಎಂಬ ಪ್ರಶ್ನೆ ಇಲ್ಲ. ರೇಣುಕಾಚಾರ್ಯರಿಗೂ ನಮ್ಮ ಬಗ್ಗೆ ಅಭಿಮಾನವಿದೆ. ಕೆಲವೊಮ್ಮೆ ಮಾತನಾಡುವಾಗ ಶಬ್ದಗಳು ತಪ್ಪಾಗುತ್ತೆ. ಆ ಬಗ್ಗೆ ಬೇಸರವಿಲ್ಲ ಎಂದರು.
ನಾವು ಸಭೆ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಸಭೆಯಲ್ಲಿ ಸರಕಾರದ ವಿಚಾರ ಪ್ರಸ್ತಾವವಾಗಿಲ್ಲ. ಸಂಪುಟ ವಿಸ್ತರಣೆ ವಿಳಂಬ ಆಗುವ ಬಗ್ಗೆ ಸಿಎಂ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಾವು ಕಾಯಬೇಕು. ಕೆಲವೇ ದಿನಗಳಲ್ಲಿ ತನಗೆ ಸಚಿವ ಸ್ಥಾನ ಸಿಗಲಿದೆ ಎಂದರು.