ಮಡಿಕೇರಿ: ವಿರಾಜಪೇಟೆ ತಾಲ್ಲೂಕು ಹರಿಹರ ಗ್ರಾಮದ ಮನೆಯೊಂದರಲ್ಲಿ ಕೋವಿ ಕಳವು ಮಾಡಿದ್ದ ಪ್ರಕರಣವನ್ನು ಶ್ರೀಮಂಗಲ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಲಾಗಿದ್ದ ಕೋವಿಯನ್ನು ವಶಕ್ಕೆ ಪಡೆದಿರುತ್ತಾರೆ. ಇದೇ ವರ್ಷದ ಅ.24 ರಿಂದ ನ.21 ರ ನಡುವಿನ ದಿನಗಳಲ್ಲಿ ವಿರಾಜಪೇಟೆ ತಾಲ್ಲೂಕು ಹರಿಹರ ಗ್ರಾಮದ ನಿವಾಸಿ ಪೂವಮ್ಮ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಬಾಗಿಲನ್ನು ಮುರಿದು ಒಳನುಗ್ಗಿ ಮನೆಯಲ್ಲಿಟ್ಟಿದ್ದ ಒಂದು ಕೋವಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಪ್ರಕರಣ ತನಿಖೆ ಕೈಗೊಂಡ ಶ್ರೀ ಮಂಗಲ ಠಾಣೆ ಪಿಎಸ್ಐ ಹೆಚ್.ಜೆ ಚಂದ್ರಪ್ಪ ನೇತೃತ್ವದ ತಂಡವು ಆರೋಪಿಗಳಾದ ಕಿರಗೂರು ಗ್ರಾಮದ ಸುಮಂತ್, ಪಿರಿಯಾಪಟ್ಟಣ ತಾಲ್ಲೂಕು ನೇರಳೆಗುಪ್ಪೆ ಗ್ರಾಮದ ನಿವಾಸಿಗಳಾದ ಸುನಿಲ್ ಕುಮಾರ್, ನವೀನ್ ಮತ್ತು ದಯಾನಂದ್ ಎಂಬುವವರನ್ನು ಬಂಧಿಸಿದ್ದು ಕಳವು ಮಾಡಿದ್ದ ಬಂದೂಕು, ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ವಶಕ್ಕೆ ಪಡೆದಿರುತ್ತಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಿ.ಎಸ್.ಐ ಹೆಚ್.ಜೆ ಚಂದ್ರಪ್ಪ, ಎಎಸ್ಐನ ಸಾಬು, ಎ.ಎಸ್.ಐ ಫ್ರಾನ್ಸಿಸ್, ಸಿಬ್ಬಂದಿಯವರಾದ ವಿಶ್ವನಾಥ, ಮನೋಹರ್, ಮನು, ರಂಜಿತ್, ಸ್ಟೀಫನ್, ಗಣೇಶ್ ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿ ಮತ್ತುಸಿಬ್ಬಂದಿಯವರ ಕಾರ್ಯವನ್ನು ಕೊಡಗು ಜಿಲ್ಲಾ ಎಸ್ಪಿ ಶ್ಲಾಘಿಸಿದ್ದಾರೆ.