ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಉಡುಪಿಯಲ್ಲಿ ರೂ. 1 ಕೋಟಿಗೂ ಅಧಿಕ ಮೊತ್ತದ ಬ್ರಹತ್ ಸಮಾಜ ಕಲ್ಯಾಣ ಸಹಾಯ ವಿತರಣೆ

Pinterest LinkedIn Tumblr

ಮುಂಬಯಿ /ಉಡುಪಿ: ಸಮಾಜದ ಉತ್ತಮ ಕೆಲಸಕ್ಕೆ ದಾನಿಗಳು ಸಹಕರಿಸುತ್ತಿದ್ದಾರೆ. ಅವರ ಮಾಡುತ್ತಿರುವ ದಾನ ಉತ್ತಮ ಕಾರ್ಯಕ್ಕೆ ಉಪಯೋಗವಾಗಿದೆ. ದಾನಿಗಳು ನಮ್ಮ ಪಾಲಿನ ದೇವರು. ಸಮಾಜದ ಅಭಿವೃದ್ದಿಗೆ ನಾವೆಲ್ಲರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.

ನ. 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಐಕಳ ಹರೀಶ್ ಶೆಟ್ಟಿಯವರು ದಾನಿಗಳನ್ನು ಎಷ್ಟು ಸನ್ಮಾನಿಸಿದರೂ ಸಾಲದು. ನಮ್ಮ ಸಮಾಜದಲ್ಲಿ ಬಲಿಷ್ಟ ನಾಯಕರಿದ್ದಾರೆ. ರಾಜಕೀಯದಲ್ಲಿ ನಮ್ಮವರು ಉನ್ನತ ಹುದ್ದೆಯಲ್ಲಿದ್ದಾರೆ, ಆದರೆ ನಮ್ಮ ಸಮಾಜಕ್ಕೆ ಅವರ ಸಹಾಯ ಸಹಕಾರ ಸಾಲದು. ಸಮಾಜದಲ್ಲಿ ಅಭಿಮಾನವಿಟ್ಟು ಕೆಲಸಮಾಡುವ ಯಾವನೇ ವ್ಯಕ್ತಿಗೆ ನಾವೂ ಸಹಕರಿಸಬೇಕು. ಬೇರೆ ಸಮಾಜವನ್ನು ಪ್ರೀತಿಸುವವರು ಬಂಟ ಸಮಾಜದವರು. ಇಂದಿನ ಒಟ್ಟು ಯೋಜನಯಲ್ಲಿ ಶೇಖಡಾ 25 ರಷ್ಟು ಇತರ ಸಮಾಜಕ್ಕೂ ಸಹಕರಿಸುತ್ತೇವೆ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಒಕ್ಕೂಟದ ಪದಾಧಿಕಾರಿಗಳು, ನಿರ್ದೇಶಕರುಗಳು, ಮಹಾಪೋಷಕರು, ಕಾರ್ಯಕಾರಿ ಸಮಿತಿ ಹಾಗೂ ದಾನಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮಗಳು ನಡೆಯಿತು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಆರ್ಥಿಕವಾಗಿ ಅಸಾಯಕರಾಗಿರುವ ಸಮಾಜ ಬಾಂಧವರಿಗೆ ಆರ್ಥಿಕ ಸಹಾಯ, ವಸತಿ ನಿರ್ಮಾಣ, ಕೋರೋನಾ ಪೀಡಿತರಿಗೆ ಹಾಗೂ ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, ಹತ್ತು, ಹನ್ನೆರಡು, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಇತ್ಯಾದಿ ಸಹಾಯವನ್ನು ನೀಡಲು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬ್ರಹತ್ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮವನ್ನು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ನಡೆದಿದ್ದು ಕಾರ್ಯಕ್ರಮವನ್ನು ಅರ್. ಎಸ್. ಎಸ್. ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು,

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಬಗ್ಗೆ ಮಾತನಾಡಿದ ಒಕ್ಕೂಟ ದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿಯವರು ಕೆಲವು ವರ್ಷಗಳ ಹಿಂದೆ ಬಂಟರ ಸಮಾಜದ ಒಕ್ಕೂಟವನ್ನು ಸ್ಥಾಪಿಸಿದ್ದು ಜಾಗತಿಕ ಬಂಟರ ಸಂಘದ ಪ್ರತಿಷ್ಠಾನ ಸ್ಥಾಪನೆಯಾಯಿತು.

ಆ ನಂತರ 2018 ರಲ್ಲಿ ಈ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕ್ಕೆ ಒಂದು ಹೊಸ ರೂಪ ಬಂತು. ಮುಂಬಯಿಯ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಇದರ ಅಧ್ಯಕ್ಷರಾದರು. ಅದರ ನಂತರದ ದಿನಗಳಲ್ಲಿ ನಿರಂತರವಾಗಿ ಸಮಾಜ ಮುಖಿ ಕಾರ್ಯಕ್ರಮಗಳು ನಡೆಯತೊಡಗಿತು. ಇದೇ ವೇದಿಕೆಯಲ್ಲಿ ಸುಮಾರು 60 ಜನ ಗಣ್ಯರ ಉಪಸ್ಥಿತಿಯಲ್ಲಿ ವಿಶ್ವ ಬಂಟರ ಸಮ್ಮೇಳನವೂ ನಡೆಯಿತು.

ಬಡವರಿಗೆ ನೂರಾರು ಮನೆ ನಿರ್ಮಾಣ ಮಾಡಲಾಯಿತು. ಅದಲ್ಲದೆ ವೈದ್ಯಕೀಯ ನೆರವು, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಮಾತ್ರವಲ್ಲದೆ ವಿದ್ಯಾಭ್ಯಾಸಕ್ಕೆ ನೆರವು ಹೀಗೇ ಕೋಟ್ಯಂತರ ರೂಪಾಯಿಯ ನೆರವನ್ನು ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಇತರ ಸಮಾಜದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೂ ಆರ್ಥಿಕ ಸಹಾಯ ನೀಡಲಾಯಿತು. ಈ ಎರಡು ದಿನಗಳ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಕೋಟಿ್ಯ ಸಹಾಯವನ್ನು ನೀಡಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಗೌರವ ಅಥಿತಿಗಳಾಗಿ ಆಗಮಿಸಿದ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರು ಮಾತನಾಡುತ್ತಾ ಇಂದು ದಾಖಲೆ ಪ್ರಮಾಣದ ಸೇವೆಗೆ ಚಾಲನೆ ನೀಡಲಾಗಿದೆ. ಉಭಯ ಜಿಲ್ಲೆಗಳಲ್ಲಿ ಉತ್ತಮ ಕಾರ್ಯಕ್ರಮ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಯಾವಾಗಲೂ ಅದ್ದೂರಿಯ ಕಾರ್ಯಕ್ರಮಗಳು ನಡೆಯುತ್ತಿದೆ. ಅವರ ಮನಸ್ಸೂ ದೊಡ್ಡದು. ಇಂತಹ ಕಾರ್ಯಕ್ರಮಗಳೂ ಇತರ ಸಮಾಜಕ್ಕೆ ಮಾದರಿ ಕಾರ್ಯಕ್ರಮ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕುಸುಮೋದರ ಶೆಟ್ಟಿಯವರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗಿದ್ದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸನ್ಮಾನ ಪತ್ರವನ್ನು ವಾಚಿಸಿದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಶಾಸಕ ಕೆ. ರಘುಪತಿ ಭಟ್ ಮಾತನಾಡುತ್ತಾ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಅಭಿನಂದನೆಗಳು. ಕೋವಿಡ್ ನಿಂದಾಗಿ ಎಲ್ಲರೂ ಸಮಸ್ಯೆಯನ್ನು ಎದುರಿಸುತ್ತಿದ್ದು ತಮ್ಮಿಂದಲೂ ಬಡವರಾಗಿರುವವರಿಗೆ ಒಕ್ಕೂಟದ ಮೂಲಕ ಸಹಕರಿಸುವ ಕೆಲಸವನ್ನು ಮಾಡಲಾಗಿದೆ. ಜಾತ್ಯಾತೀತ ಸಮಾಜ ಬಂಟರ ಸಮಾಜ. ಬಡವರಿಗೆ ಸಹಕರಿಸುವ ಕೆಲಸ ಇಂದು ಆಗಿದೆ.

ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಾವೇನಾದರೂ ನೀಡಿದ್ದರೆ ಈ ಸಂಘಟನೆ ಮೂಲಕ ನಮ್ಮ ಸಮಾಜಕ್ಕೆ ನೀಡಿದ್ದೇವೆ. ಅಸಾಧ್ಯವಾದದನ್ನು ಸಾಧ್ಯವಾಗಿಸುವ ವ್ಯಕ್ತಿ ಐಕಳ ಹರೀಶ್ ಶೆಟ್ಟಿ. ಈ ಸಂಘಟನೆಯು ಸಮಾಜ ಸೇವೆಯು ರಾಜಕೀಯ ಶಕ್ತಿಯ ಮೂಲಕವೂ ಎತ್ತರಕ್ಕೆ ಬೆಳೆಯಲಿ ಎಂದರು.

ಕಾರ್ಯಕ್ರಮಕ್ಕೆ ಗೌರವ ಅಥಿತಿಯಾಗಿ ಆಗಮಿಸಿದ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಮುಂಡ್ಕೂರು ಯವರು ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಇದು ಎರಡನೇ ಮೆಘಾ ಸಮಾಜ ಕಲ್ಯಾಣ ಸಹಾಯ ವಿತರಣೆ. ಇಂದಿನ ಈ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಏನೂ ಇಲ್ಲದಿದ್ದರೂ ಇತರರಿಂದ ಸಹಾಯದ ಮೂಲಕ ಜನ ಸೇವೆ ಮಾಡುತ್ತಿದ್ದು ಇಂತಹ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಶ್ ಶೆಟ್ಟಿ, ಕೃಷ್ಣ ಶೆಟ್ಟಿ , ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ಸರಿತಾ ಕುಸುಮೋದರ ಶೆಟ್ಟಿ, ಸುಧಾಕರ ಹೆಗ್ಡೆ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಬಂಟರ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ನೈಜೀರಿಯಾದ ಜಿ.ಐ.ಎ. ಇಂಟರ್ ಗ್ಲೋಬಲ್ ನ ಸಿ.ಎಂ. ಡಿ. ಅಜಿತ್ ಚೌಟ, ಓಮನ್ ಅಭೀರ್ ಗ್ರೂಫ್ ಆಪ್ ಕಂಪನೀಸ್ ನ ಸಿ.ಎಂ.ಡಿ. ಶಶಿಧರ್ ಶೆಟ್ಟಿ ಓಮನ್, ಶಕುಂತಳ ಸದಾನಂದ ಶೆಟ್ಟಿ , ರತ್ನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಾನಿಗಳನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಗೌರವಿಸಿದರು.

ಕಾರ್ಯಕ್ರಮವನ್ನು ಅಶೋಕ್ ಪಕ್ಕಳ ನಿರ್ವಹಿಸಿದರೆ ದಾನಿಗಳ ಹೆಸರನ್ನು ಕಾರ್ನೂರು ಮೋಹನ್ ರೈ ಯವರು ವಾಚಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿ ಸತೀಷ್ ಅಡಪ ಸಂಕಬೈಲ್ ಕೊನೇಗೆ ವಂದನಾರ್ಪಣೆ ಮಾಡಿದರು.

ವೇದಿಕೆಯಲ್ಲಿ ಧೈರ್ಯದಿಂದ ಮಾತನಾಡಲು ಕಲಿಸಿದ್ದು ನಮ್ಮ ಬಂಟರ ಸಂಘ – ಕೆ. ಡಿ. ಶೆಟ್ಟಿ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಡುಪಿಯ ಸಮಾಜ ಕಲ್ಯಾಣ ಸಹಾಯ ವಿತರಣೆ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಈ ಸಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕುಸುಮೋದರ ಶೆಟ್ಟಿ (ಕೆ. ಡಿ. ಶೆಟ್ಟಿ) ಯವರು ಮಾತನಾಡುತ್ತಾ, ಪ್ರಶಸ್ತಿಯನ್ನು ನಾವು ಹುಡುಕಿಕೊಂಡು ಹೋಗಬೇಕಾಗಿಲ್ಲ ಉತ್ತಮ ಕೆಲಸ ಮಾಡಿದಲ್ಲಿ ಪ್ರಶಸ್ತಿಯು ನಮ್ಮನ್ನು ಹರಸಿಕೊಂಡು ಬರುತ್ತದೆ.

ಕನ್ನಡಕ್ಕಾಗಿ ಕನ್ನಡದ ಮಕ್ಕಳಿಗಾಗಿ ನಾನು ನನಗೆ ಶಕ್ತಿ ಮೀರಿ ಸಹಕರಿಸಿದ್ದೇನೆ. ದಾನ ಧರ್ಮ ನನ್ನ ರಕ್ತದಲ್ಲೇ ಹರಡಿದೆ. ಮಕ್ಕಳಿಗೆ ನೀಡುತ್ತಿರುವ ಈ ಸಹಾಯವು ಬಂಟ ಸಮಾಜದ ಪ್ರಸಾದ. ಇದನ್ನು ಸ್ವೀಕರಿಸಿ ಮುಂದಿ ನೀವು ಉತ್ತಮ ನಾಗರಿಗರಾಗಿ ಮುಂದಿನ ಪೀಳಿಗೆಗೆ ಸಹಕರಿಸುವಂತಾಗಲಿ. ಇಂದಿನ ಕೊರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಐಕಳ ಹರೀಶ್ ಶೆಟ್ಟಿ ಮತ್ತವರ ತಂಡದ ಕಾರ್ಯ ಪ್ರಶಂಸನೀಯ ಎಂದರು. .

ಎಲ್ಲರನ್ನು ಪ್ರೀತಿಸಿ ಗೌರವಿಸುವ ಸಮಾಜ ಬಂಟ ಸಮಾಜ – ಕಲ್ಲಡ್ಕ ಪ್ರಭಾಕರ ಭಟ್

ಬಂಟ್ಸ್ ಸಮಾಜ ನಮ್ಮ ನಾಡಿನ ಒಂದು ಕೃಷಿ ಸಮಾಜ ಅದರೊಂದಿಗೆ ತಮ್ಮ ಉದ್ಯಮವನ್ನು ಬೆಳೆಸಿಕೊಂಡ ಸಮಾಜ. ಇಂತಹ ಬಂಟ್ಸ ಸಮಾಜದ ಬಂದುಗಳು ಮುಂಬಯಿ, ವಿದೇಶದಿಂದ ಹಾಗೂ ಇತರೆಡೆಯಿಂದ ಬಂದು ಕಷ್ಟದಲ್ಲಿರುವ ಈ ಸಮಯದಲ್ಲಿ ತಮ್ಮ ಹುಟ್ಟೂರ ಜನತೆಗೆ ಸಹಕರಿಸುತ್ತಿರುವ ಸಮಾಜ ಬಂಟ ಸಮಾಜ. ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಜನ ಸೇವೆಯನ್ನು ಮಾಡುತ್ತಿರುವ ಸಮಾಜ ಬಂಟರ ಸಮಾಜ. ಈಗೆ ಎಲ್ಲರನ್ನು ಗುರುತಿಸಿ ಗೌರವಿಸುವ ಸಮಾಜ ಇದು.

ವಿದ್ಯಾರ್ಥಿಗಳಿಗೆ ಸಹಾಕಾರ ನೀಡುವ ಯೋಜನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿ ಜೀವನ ಸರ್ವಶ್ರೇಷ್ಠ. ಜಗತ್ತಿನಲ್ಲಿ ಸರ್ವಶ್ರೇಷ್ಠ ಸಮಾಜವೊಂದಿದ್ದರೆ ಅದು ಹಿಂದೂ ಸಮಾಜ. ಮುಂದಿನ ದಿನಗಳಲ್ಲಿ ಬಾರತವೇ ಕೇಂದ್ರ. ಭಾರತದಿಂದ ಎಲ್ಲವನ್ನು ಪಡೆಯಬಹುದು. ನಮ್ಮಲ್ಲಿ ಯಾವುದಕ್ಕೂ ಕಡೆಮೆಯಿಲ್ಲ. ಅಂತಹ ಎಲ್ಲಾ ಸಂಸ್ಕೃತಿ ಇಲ್ಲಿದೆ. ಅಂತಹ ಶಿಕ್ಷಣವನ್ನು ಪಡೆಯುವ ಎಲ್ಲಾ ಸಮುದಾಯದ ಮಕ್ಕಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುತ್ತಿದೆ. ಕಷ್ಟದಲ್ಲಿರುವವರ ಕಣ್ಣೀರನ್ನು ಒರಸುವ ಕಾರ್ಯವನ್ನು ಈ ಸಮಾಜವು ಮಾಡುತ್ತಿದ್ದು ಈ ಸಂಘಟನೆಗೆ ದೇವರು ಇನಷ್ಟು ಶಕ್ತಿಯನ್ನು ಒದಗಿಸಲಿ ಎಂದರು.

ಡಿಕೆಶಿಯವರಿಗೆ ಗೌರವ ಸನ್ಮಾನ:

ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಸಹಾಯ ವಿತರಣೆ ಸಮಾರಂಭವು ಬಂಟರ ಸಮಾಜದ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ್ದು ಈ ಸಂದರ್ಭದಲ್ಲಿ ಕರ್ನಾಕದ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಆಗಮಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜಪರ ಕಾರ್ಯಕ್ರಮಗಳನ್ನು ನೋಡಿದ ಡಿ. ಕೆ. ಶಿವಕುಮಾರ್ ಅವರು ಬಂಟ ಸಮಾಜವು ಬಡವರ ಕಣ್ಣೀರೊರಸುವ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇಂತಹ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ನಾನೂ ಇದ್ದೇನೆ ಎಂದರು. ಐಕಳ ಹರೀಶ್ ಶೆಟ್ಟಿಯವರ ನಾಯಕತ್ವದ ಬಗ್ಗೆ ದೂರದ ಬೆಂಗಳೂರಿನಲ್ಲಿರುವ ನಾನು ಬಹಳ ಕೇಳಿರುವೆನು ಎನ್ನುತ್ತಾ ಸಮಾರಂಭಕ್ಕೆ ಶುಭ ಹಾರೈಸಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಾಗವಹಿಸಲು ಬಂದಿದ್ದ ಡಿ. ಕೆ. ಶಿವಕುಮಾರ್ ಜಾಗತಿಕ ಬಂಟರ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಈ ಸಂಧರ್ಭದಲ್ಲಿ ಸ್ಡಿ. ಕೆ. ಶಿವಕುಮಾರ್ ಅವರಿಗೆ ಕೃತಜ್ನತೆ ಸಲ್ಲಿಸುತ್ತಾ ಪಕ್ಷ ಯಾವುದೇ ಆಗಲಿ ಉತ್ತಮ ಕೆಲಸ ಮಾಡುವವರೊಂದಿಗೆ ಬಂಟ ಸಮಾಜವು ಯವತ್ತೂ ಇದೆ ಎಂದರು.

ಸಮಾರಂಭಕ್ಕೆ ರಾಜಕೀಯ ಮುಖಂಡರುಗಳಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಿಥುನ್ ರೈ ಹಾಗೂ ಡಾ. ದೇವಿ ಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ ಪಡುಬಿದ್ರೆ ಆಗಮಿಸಿ ಸುಭ ಹಾರೈಸಿದರು.

ವರದಿ : ಈಶ್ವರ ಎಂ. ಐಲ್  /  ಚಿತ್ರ : ದಿನೇಶ್ ಕುಲಾಲ್

Comments are closed.