
ಮೈಸೂರು: ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಒಂದೊಂದಾಗೇ ತುಂಬಿಸುತ್ತಿದ್ದಾರೆ. ಈ ಮಧ್ಯೆ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಬಹಿರಂಗವಾಗೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮುಂದೆ ನೋಡಿಕೊಳ್ಳುತ್ತೇವೆ ಬಿಡಿ ಎಂದು ಸವಾಲು ಹಾಕಿದ್ದಾರೆ.
ಹೌದು, ಆಪರೇಷನ್ ಕಮಲದ ರೂವಾರಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಸಂಸದ ಶ್ರೀನಿವಾಸ್ ಪ್ರಸಾದ್. ಮೈಸೂರಿನಲ್ಲಿ ಹೆಚ್. ವಿಶ್ವನಾಥ್ ಹಾಗೂ ಇನ್ನುಳಿದ ಶಾಸಕರನ್ನು ಒಟ್ಟುಗೂಡಿಸಿ ರಾಜೀನಾಮೆ ಕೊಡಿಸಲು ಶ್ರೀನಿವಾಸ್ ಪ್ರಸಾದ್ ಮಹತ್ವದ ಪಾತ್ರ ವಹಿಸಿದ್ದರು. ಪ್ರತಿ ಸಭೆಯಲ್ಲೂ ಯಾರನ್ನು ರಾಜೀನಾಮೆ ಕೊಡಿಸಬೇಕು? ಯಾರ ಜೊತೆ ಮಾತನಾಡಬೇಕು? ಎಂಬ ಪ್ಲಾನ್, ಸ್ಕೆಚ್ ಎಲ್ಲ ನಡೆಯುತ್ತಿದ್ದುದೇ ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿರುವ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿವಾಸದಲ್ಲಿ. ಈ ಮೂಲಕ ಯಡಿಯೂರಪ್ಪನವರನ್ನು ಸಿಎಂ ಮಾಡಲು ಶ್ರೀನಿವಾಸ್ ಪ್ರಸಾದ್ ಪಾತ್ರ ಬಹು ದೊಡ್ಡದಾಗಿತ್ತು.
ಆದರೀಗ ಶ್ರೀನಿವಾಸ್ ಪ್ರಸಾದ್ ಸಿಎಂ ಯಡಿಯೂರಪ್ಪನವರ ವಿರುದ್ಧವೇ ಗರಂ ಆಗಿದ್ದಾರೆ. ಮೈಸೂರಿನಲ್ಲಿಂದು ಸಿಎಂ ವಿರುದ್ದ ಮಾತನಾಡಿರುವ ಶ್ರೀನಿವಾಸ್ ಪ್ರಸಾದ್, ಯಡಿಯೂರಪ್ಪ ಸಿಎಂ ಆಗಿ ಆಯಿತಲ್ಲ. ಈಗ ಅವರ ಕೆಲಸ ಮುಗಿದಿದೆ, ನಮ್ಮ ಅಗತ್ಯ ಅವರಿಗಿಲ್ಲ ಎಂದು ನೇರವಾಗಿಯೇ ಚಾಟಿ ಬೀಸಿದ್ದಾರೆ.
ಯಡಿಯೂರಪ್ಪನವರು ಸಿಎಂ ಆದ ನಂತರ ಶ್ರೀನಿವಾಸ್ ಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅಂತ ಅವರ ಆಪ್ತ ವಲಯದಲ್ಲಿ ಗುಸು ಗುಸು ನಡೆಯುತ್ತಿತ್ತು. ಇದ್ಯಾವುದಕ್ಕೂ ಇಷ್ಟು ದಿನ ಶ್ರೀನಿವಾಸ್ ಪ್ರಸಾದ್ ನೇರವಾಗಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಯಾವಾಗ ನಿಗಮ ಮಂಡಳಿಗಳ ನೇಮಕದ ಹೆಸರುಗಳು ಒಂದೊಂದಾಗೇ ಪ್ರಕಟವಾಗಲು ಪ್ರಾರಂಭವಾಯಿತೋ, ಅದರಲ್ಲಿ ತಾವು ಸೂಚಿಸಿದವರ ಹೆಸರುಗಳು ಇಲ್ಲ ಅಂತ ಗೊತ್ತಾಯ್ತೋ ಆಗಲೇ ಸಿಎಂ ವಿರುದ್ಧ ಕೆಂಡ ಕಾರಿದ್ದಾರೆ. ಅದರಲ್ಲೂ ಇಂದು ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಲು ಸುತ್ತೂರಿಗೆ ಸಿಎಂ ಭೇಟಿ ನೀಡಿದ್ದರು. ಈ ವೇಳೆ ಸುತ್ತೂರು ಶ್ರೀಗಳ ಎದುರೇ ಶ್ರೀನಿವಾಸ್ ಪ್ರಸಾದ್ ಗರಂ ಆಗಿದ್ದಾರೆ.
ಶಂಕುಸ್ಥಾಪನೆ ನಂತರ ಮಠದ ಒಳಗೆ ಕುಳಿತು ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ಎದುರು ಸಿಕ್ಕ ಸಿಎಂ ಯಡಿಯೂರಪ್ಪ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ನೇರವಾಗೆ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಧಿಕಾರಕ್ಕೆ ಬರುವಾಗ ನಾವು ಬೇಕಿತ್ತು. ಈಗ ನಾವು ಹೇಳಿದ ಒಬ್ಬರಿಗೂ ಅಧ್ಯಕ್ಷ ಸ್ಥಾನ ನೀಡಲ್ಲ ಅಂದರೆ ಅದರ ಅರ್ಥ ಏನು? ಎಂದು ಗರಂ ಆಗಿದ್ದಾರೆ.
ಇದನ್ನೂ ಓದಿ: ಕೇವಲ 17 ಜನರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ; ರೇಣುಕಾಚಾರ್ಯ ಮತ್ತೆ ವಾಗ್ದಾಳಿಇದಕ್ಕೆ ತಕ್ಷಣ ಎಚ್ಚೆತ್ತುಕೊಂಡ ಸಿಎಂ ಶ್ರೀನಿವಾಸ್ ಪ್ರಸಾದ್ ಅವರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಆಯ್ತು, ಇರಿ. ಇನ್ನು ಮೂರು ದಿನದಲ್ಲಿ ಎಲ್ಲಾ ಸರಿ ಮಾಡುತ್ತೇನೆ, ಸಿಟ್ಟು ಮಾಡಿಕೊಳ್ಳಬೇಡಿ ಎಂದಿದ್ದಾರೆ. ಈ ವೇಳೆ ಇನ್ನೊಮ್ಮೆ ಶ್ರೀನಿವಾಸ್ ಪ್ರಸಾದ್ ಅವರಿಂದ ಬೆಂಬಲಿಗರ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಪಡೆದಿದ್ದಾರೆ.
ಸಿಎಂ ವಿರುದ್ದ ಶ್ರೀನಿವಾಸ್ ಪ್ರಸಾದ್ ಸಿಟ್ಟಾಗಲು ಅವರ ಕುಟುಂಬದ ಒತ್ತಡವೂ ಕಾರಣ ಇರಬಹುದು ಎಂದೂ ಹೇಳಲಾಗುತ್ತಿದೆ. ಶ್ರೀನಿವಾಸ್ ಪ್ರಸಾದ್ ಅವರ ಅಳಿಯ, ಶಾಸಕ ಹರ್ಷವರ್ಧನ್ ಹಾಗೂ ತನ್ನ ತಂಗಿಯ ಮಗನಾದ ಧೀರಜ್ ಇಬ್ಬರೂ ಸಹ ಸಚಿವ ಸಂಪುಟ ಹಾಗೂ ನಿಗಮ ಮಂಡಳಿಯ ಆಕಾಂಕ್ಷಿಗಳಾಗಿದ್ದಾರೆ. ನಿನ್ನೆಯಿಂದ ಬಿಡುಗಡೆಯಾದ ಪಟ್ಟಿಯಲ್ಲಿ ಇವರಿಬ್ಬರ ಹೆಸರೂ ಕಾಣಲಿಲ್ಲ. ಈ ಕಾರಣದಿಂದಾಗಿ ಶ್ರೀನಿವಾಸ್ ಪ್ರಸಾದ್ ಸಿಟ್ಟಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಸಿಕ್ಕಿದೆ.
ಒಟ್ಟಾರೆ, ಆಪರೇಷನ್ ಕಮಲದ ರೂವಾರಿಗಳೇ ಸರ್ಕಾರದ ವಿರುದ್ಧ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಎಲ್ಲೋ ಒಂದೆಡೆ ಹಿಂದೆ ಸಹಾಯ ಮಾಡಿದವರನ್ನ ಯಡಿಯೂರಪ್ಪ ಮರೆಯುತ್ತಿದ್ದಾರಾ? ಎಂಬ ಚರ್ಚೆಗೂ ಇದು ಕಾರಣವಾಗಿದೆ. ಮುಂದೆ ಈ ರೀತಿಯ ಒಳ ಬೇಗುದಿಯನ್ನು ಹೇಗೆ ಸರಿಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments are closed.