ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಟಾಂಗ್ ನೀಡಿದ್ದು, ನಿಮ್ಮಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದದ್ದಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯ 105 ಶಾಸಕರು ಗೆದ್ದಿದ್ದಕ್ಕೆ, ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಹೊರತು ಯಾರೊಬ್ಬರಿಂದಲೂ ಅಲ್ಲ ಎಂದು ಹೇಳುವ ಮೂಲಕ ರಮೇಶ್ ಜಾರಕಿ ಹೊಳಿ, ಸಿ.ಪಿ.ಯೋಗೀಶ್ವರ್ ಮತ್ತಿತರರ ವಿರುದ್ಧ ಹರಿಹಾಯ್ದಿದ್ದಾರೆ.
105 ಶಾಸಕರು ಇಲ್ಲದೇ ಇದ್ದಿದ್ದರೆ ಸರ್ಕಾರ ಹೇಗೆ ಆಗುತ್ತಿತ್ತು? ಬಿಜೆಪಿ ಪಕ್ಷದ ಕಾರ್ಯಕರ್ತರ ತಪಸ್ಸಿನಿಂದಾಗಿ 105 ಶಾಸಕರು ಗೆದ್ದಿದ್ದಾರೆ. ಮೊದಲು 105 ಶಾಸಕರು, ಆಮೇಲೆ ಉಳಿದವರು ಗೆದ್ದಿದ್ದಾರೆ. ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲಾಗದು. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಅಧಿಕಾರಕ್ಕೆ ಬಂದಿದೆ. ಮೊದಲು 105 ಜನ ಗೆದ್ದರು. ಆಮೇಲೆ ಕಾಂಗ್ರೆಸ್, ಜೆಡಿಎಸ್ನಿಂದ 17 ಜನ ಬಿಜೆಪಿಗೆ ಬಂದಿದ್ದಾರೆ. ಅವರೆಲ್ಲರೂ ಕಾಂಗ್ರೆಸ್, ಜೆಡಿಎಸ್ ನಿಂದ ಬೇಸತ್ತು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ರೇಣುಕಾಚಾರ್ಯ ವಿಧಾನಸೌಧದಲ್ಲಿ ಹೇಳಿದ್ದಾರೆ.
ನನ್ನಿಂದಲೇ ಸರ್ಕಾರ ಬಂದಿದೆ ಅಂತ ಯಾರು ಹೇಳುತ್ತಾರೋ ಅವರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮತ್ತೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ವಲಸಿಗ ಶಾಸಕರಿಗೆ ತಿರುಗೇಟು ನೀಡಿದ್ದಾರೆ.
ನನಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ಸಿಎಂ ವರಿಷ್ಠರ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಕೊಟ್ಟರೆ ತಪ್ಪೇನು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಪಕ್ಷದ ತೀರ್ಮಾನ ಮುಖ್ಯ. ನಾವೂ ಸಹ ನಾಯಕರಿಗೆ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದೇವೆ. ಜನರಿಂದ ನೇರವಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ಕೊಡೋದು ಶಿಷ್ಟಾಚಾರ. ಪಕ್ಷ, ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ ಎಂದಿದ್ದಾರೆ.
ಇಂದು ಹತ್ತು ಜನ ಶಾಸಕರು ಒಟ್ಟಿಗೆ ನಮ್ಮ ಮನೆಯಲ್ಲಿ ಉಪಹಾರಕ್ಕೆ ಸೇರಿದ್ದೆವು. ನಾವೇನು ರೆಸಾರ್ಟ್, ಹೋಟೆಲ್ ನಲ್ಲಿ ಸಭೆ ನಡೆಸಿಲ್ಲ. ನಮ್ಮ ಮನೆಯಲ್ಲಿ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ನಮ್ಮ ಅಭಿಪ್ರಾಯವನ್ನ ವರಿಷ್ಠರ ಗಮನಕ್ಕೆ ತರುತ್ತೇವೆ ಎಂದು ಎಂಪಿ ರೇಣುಕಾಚಾರ್ಯ ತಿಳಿಸಿದ್ದಾರೆ.