ಕರ್ನಾಟಕ

ಬೆಂಗಳೂರು ತಂತ್ರಜ್ಞಾನ ಮೇಳ-2020 ಉದ್ಘಾಟಿಸಿದ ಮೋದಿ !

Pinterest LinkedIn Tumblr

ಬೆಂಗಳೂರು: 23ನೇ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್-2020)ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿದರು.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಯೋಜಿಸಲಾಗಿರುವ ಮೂರು ದಿನಗಳ ಈ ತಂತ್ರಜ್ಞಾನ ಮೇಳವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನವೇ ಭವಿಷ್ಯದ ಶಕ್ತಿಯಾಗಿದೆ. ಕೇಂದ್ರ ಸರ್ಕಾರ 2015ರಲ್ಲಿ ಆರಂಭಿಸಿದ್ದ ಡಿಜಿಟಲ್ ಇಂಡಿಯಾ ಇಂದು ನಮ್ಮ ಜೀವನದ ಭಾಗವಾಗಿ ಬದಲಾವಣೆಯಾಗಿದ್ದು, ಭೀಮ್ ಯುಪಿಐ(ಹಣ ಪಾವತಿ ಆಪ್) ಅದಕ್ಕೆ ಒಂದು ಉದಾಹರಣೆಯಾಗಿದೆ ಎಂದರು.

ಅಂದು ಡಿಜಿಟಲ್ ಇಂಡಿಯಾವನ್ನು ಸರ್ಕಾರದ ಅಭಿಯಾನವನ್ನಾಗಿ ಆರಂಭಿಸಿದ್ದು ಇಂದು ಈ ಮಟ್ಟದಲ್ಲಿ ಬೆಳೆಯಲು ತಂತ್ರಜ್ಞಾನವೇ ಕಾರಣ. ತಮ್ಮ ಸರ್ಕಾರದ ಮಾದರಿ ತಂತ್ರಜ್ಞಾನ ಮೊದಲು ಎಂಬುದಾಗಿದೆ. ತಂತ್ರಜ್ಞಾನ ಮುಖ್ಯವಾಗಿ ಇಂದು ಬಡವರು, ನಿರ್ಗತಿಕರಿಗೆ ಸಹ ಸಹಾಯ ಮಾಡುತ್ತಿದ್ದು ಸರ್ಕಾರದ ಆಡಳಿತಯಂತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹ ಸುಲಭವನ್ನುಂಟುಮಾಡಿದೆ ಎಂದರು.

ನಮ್ಮ ದೇಶ ಹಲವು ಮಾನವ ಕೇಂದ್ರಿತ ಯೋಜನೆಗಳು, ನಡೆ, ದೃಷ್ಟಿಕೋನವನ್ನು ಅಭಿವೃದ್ಧಿಯ ಕಡೆಗೆ ಕಂಡಿದೆ. ಬೃಹತ್ ಮಟ್ಟದಲ್ಲಿ ತಂತ್ರಜ್ಞಾನವನ್ನು ಬಳಸುವುದರಿಂದ ನಮ್ಮ ನಾಗರಿಕರ ಜೀವನದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ.ಇದರ ಪ್ರಯೋಜನವನ್ನು ಎಲ್ಲರೂ ಕಾಣಬಹುದು ಎಂದರು.

ಇಂದು ನಾವು ಮಾಹಿತಿ ಯುಗದ ಮಧ್ಯಭಾಗದಲ್ಲಿದ್ದೇವೆ. ಈ ಯುಗದಲ್ಲಿ ಮೊದಲು ಯಾರು ಹೆಜ್ಜೆಯಿಡುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ, ಯಾರು ಉತ್ತಮವಾಗಿ ಮುಂದಡಿ ಇರುತ್ತಾರೆ ಎಂಬುದು ಮುಖ್ಯ ವಿಷಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಯಶಸ್ವಿಯಾಗಿ ಡಿಜಿಟಲ್ ಮತ್ತು ಟೆಕ್ ಸೊಲ್ಯೂಷನ್ ಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಸರ್ಕಾರದ ಎಲ್ಲಾ ಯೋಜನೆಗಳಿಗೆ ತಂತ್ರಜ್ಞಾನ ಒಂದು ಭಾಗವಾಗಿದೆ. ತಂತ್ರಜ್ಞಾನದ ಮೂಲಕ ಮಾನವನ ಘನತೆ ಹೆಚ್ಚಾಗಿದೆ. ಒಂದು ಕ್ಲಿಕ್ ಮೂಲಕ ಕೋಟ್ಯಂತರ ರೈತರು ಧನಸಹಾಯದ ನೆರವು ಪಡೆದಿದ್ದಾರೆ. ಕೊರೋನಾ ಲಾಕ್ ಡೌನ್ ಕಠಿಣ ಪರಿಸ್ಥಿತಿಯಲ್ಲಿ ತಂತ್ರಜ್ಞಾನ ಮೂಲಕವೇ ಭಾರತೀಯರು ಹಲವು ಸೌಲಭ್ಯಗಳ ಸಹಾಯವನ್ನು ಪಡೆದಿರುವುದು ಎಂದು ಪ್ರಧಾನಿ ಹೇಳಿದರು.

ತಂತ್ರಜ್ಞಾನ ಮೂಲಕವೇ ನಮ್ಮ ಯೋಜನೆಗಳು ಸರ್ಕಾರದ ದಾಖಲೆಯಿಂದ ಜನರ ಜೀವನಕ್ಕೆ ಅತ್ಯಂತ ವೇಗವಾಗಿ, ನಿಖರವಾಗಿ ತಲುಪಲು ಸಾಧ್ಯವಾಗಿದೆ, ತಂತ್ರಜ್ಞಾನ ವಿಷಯ ಬಂದಾಗ ಅದನ್ನು ಕಲಿಯಲು ಮತ್ತು ಒಟ್ಟಾಗಿ ಬೆಳವಣಿಗೆ ಹೊಂದುವಲ್ಲಿ ಸಾಕಷ್ಟು ದೂರ ನಾವೆಲ್ಲರೂ ಕ್ರಮಿಸಬೇಕಾಗಿದೆ. ತಂತ್ರಜ್ಞಾನದ ಬೆಳವಣಿಗೆಯನ್ನು ಆಧರಿಸಿ ಭಾರತದಲ್ಲಿ ಸಾಕಷ್ಟು ಇನ್ಕ್ಯುಬೇಷನ್ ಕೇಂದ್ರಗಳು ತೆರೆಯುತ್ತಿವೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಹ್ಯಾಕಥಾನ್ ಸಂಸ್ಕೃತಿ ಭಾರತದಲ್ಲಿ ಆಯೋಜಿಸಲ್ಪಡುತ್ತಿವೆ. ಅವುಗಳಲ್ಲಿ ಕೆಲವುದಕ್ಕೆ ನಾನು ಭಾಗಿಯಾಗಿದ್ದೇನೆ ಎಂದರು.

ಸೈಬರ್ ಭದ್ರತಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ದೇಶದ ಯುವಜನತೆ ಪ್ರಮುಖ ಪಾತ್ರ ವಹಿಸುತ್ತಾರೆ. ಈ ವಿಷಯದಲ್ಲಿ ಯುವಜನತೆಯ ಸಾಮರ್ಥ್ಯ, ಪ್ರತಿಭೆ, ಅವರಿಗೆ ಸಿಗುವ ಅವಕಾಶಕ್ಕೆ ಕೊನೆಯೇ ಇಲ್ಲ, ಅಸಾಧಾರಣವಾದ ಯುವಶಕ್ತಿಯನ್ನು ನಾವು ಬಳಸಿಕೊಳ್ಳಬೇಕು ಎಂದರು.

ಇಂದಿನಿಂದ ನಾಡಿದ್ದು 21ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ನ್ನು ಕರ್ನಾಟಕ ಸರ್ಕಾರ, ಕರ್ನಾಟಕ ಇನ್ನೊವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ, ವಿಷನ್ ಗ್ರೂಪ್ ಆನ್ ಇನ್ಫಾರ್ಮೇಷನ್ ಟೆಕ್ನಾಲಜಿ, ಬಯೊಟೆಕ್ನಾಲಜಿ ಅಂಡ್ ಸ್ಟಾರ್ಟ್ ಅಪ್, ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಗಳ ಸಹಯೋಗದಲ್ಲಿ ಆಯೋಜಿಸುತ್ತಿದೆ.

Comments are closed.