ಕುಂದಾಪುರ: ಸುಮಾರು ಅರ್ಧ ಗಂಟೆಗಳ ಕಾಲ 15 ಕಿ.ಮೀ ಚೇಸಿಂಗ್ ಮಾಡಿದ ಅರಣ್ಯ ಇಲಾಖೆಯವರು ಬೇಟೆಗಾರರ ಬೊಲೆರೋ ವಾಹನ ವಶಕ್ಕೆ ಪಡೆದಿದ್ದು ಈ ವೇಳೆ ವಾಹನದಲ್ಲಿದ್ದ ಬೇಟೆಗಾರರು ಪರಾರಿಯಾಗಿದ್ದಾರೆ.
ಕುಂದಾಪುರ ವಲಯ ಅರಣ್ಯಾಧಿಕಾರಿಗಳಿಂದ ನ.18 ಬುಧವಾರ ತಡರಾತ್ರಿ ಗುರುವಾರ ಮುಂಜಾನೆ ನಡುವೆ ನಡೆದ ಸಿನಿಮೀಯ ರೀತಿಯ ಮಿಂಚಿನ ಕಾರ್ಯಾಚರಣೆ ಇದಾಗಿದೆ.

ಕುಂದಾಪುರ ತಾಲೂಕು ಹರ್ಕೂರು ಮೀಸಲು ಅರಣ್ಯದಲ್ಲಿ ಬೇಟೆಗಾರರ ತಂಡ ವಾಹನದಲ್ಲಿ ಆಗಮಿಸಿ ಬೇಟೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಇಲಾಖೆಯವರನ್ನು ಕಂಡ ಬೇಟೆಗಾರರು ತಮ್ಮ ಕೆ.ಎ.-09- ಪಿ-7218 ನೋಂದಣಿಯ ಬೊಲೆರೋ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಹರ್ಕೂರು ಮಾರ್ಗವಾಗಿ ಬಗ್ವಾಡಿ ಕ್ರಾಸ್ ಹಾಗೂ ಮುಳ್ಳಿಕಟ್ಟೆ ವ್ಯಾಪ್ತಿಯಲ್ಲಿ 15 ಕಿ.ಮೀ ಆರೋಪಿಗಳ ವಾಹನವನ್ನು ಇಲಾಖಾ ಜೀಪಿನಲ್ಲಿ ಬೆನ್ನತ್ತಿದ್ದು ಕೆಂಚನೂರು ಬಳಿ ಮನೆಯ ಸಮೀಪದ ತೆಂಗಿನ ಮರಕ್ಕೆ ಬೊಲೆರೋ ಗುದ್ದಿದ ಬೇಟೆಗಾರರು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಬೊಲೆರೋದಲ್ಲಿ ನಾಲ್ವರು ಆರೋಪಿಗಳಿದ್ದ ಶಂಕೆಯಿದ್ದು ಇಲಾಖಾಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ವಾಹನದಲ್ಲಿದ್ದ ಕಬ್ಬಿಣದ ರಾಡು, ಟಾರ್ಪಲ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ದಿಲೀಪ್, ಅರಣ್ಯ ರಕ್ಷಕರಾದ ಮಂಜುನಾಥ ನಾಯ್ಕ್, ಬಂಗಾರಪ್ಪ, ಜೀಪು ಚಾಲಕ ಅಶೋಕ್ ಈ ಕಾರ್ಯಾಚರಣೆಯಲ್ಲಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.