
ತುಮಕೂರು: ಅಕ್ರಮ ಸಂಬಂಧ ಹೊಂದಿದ್ದ ಪರ ಪುರುಷನಿಗಾಗಿ ಕಟ್ಟಿಕೊಂಡ ಪತಿಯನ್ನೇ ಕೊಲೆ ಮಾಡಿದ ಪತ್ನಿಯೋರ್ವಳು ಪ್ರಿಯಕರನ ಸಹಿತ ಇದೀಗ ಜೈಲು ಪಾಲಾಗಿದ್ದಾಳೆ. ಇದೇ ನವೆಂಬರ್ 12 ರಂದು ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ಮಂಜುನಾಥ (30) ಬಿನ್ ಮೂಡ್ಲಯ್ಯ ಎಂಬ ವಿವಾಹಿತ ಪುರುಷ ಮರಣ ಹೊಂದಿದ್ದ. ಮೃತನ ಸಾವಿನ ಬಗ್ಗೆ ಅನುಮಾನ ಹೊಂದಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೇ ಸಮಯದಲ್ಲಿ ಮೃತನ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿತ್ತು. ಪೊಲೀಸರು ಊಹೆ ಮಾಡಿದ್ದ ರೀತಿಯಲ್ಲಿಯೇ ಮಂಜುನಾಥನ ಸಾವು ಸಹಜವಾಗಿರಲಿಲ್ಲ. ಆತನದ್ದು ಕೊಲೆ ಎಂಬುದಕ್ಕೆ ಬಲವಾದ ಸುಳಿವು ಸಿಕ್ಕಿತ್ತು.
ತಕ್ಷಣವೇ ಸರ್ಕಲ್ ಇನ್ಸ್ಪೆಕ್ಟರ್ ಸಿ.ಪಿ ನವೀನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ ಪೊಲೀಸರು ತನಿಖೆ ಆರಂಭಿಸಿದರು. ಪ್ರಕರಣದಲ್ಲಿ ಮೃತನ ಪತ್ನಿಯಾದ ವಿದ್ಯಾಳನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಾಗಿದೆ.
ಮಾಯಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಗ್ರಾಮದವಳಾದ ಮೃತ ಮಂಜುನಾಥನ ಪತ್ನಿ ವಿದ್ಯಾಗೆ (23) ಪ್ರಿಯಕರ ಯೋಗಿ (32) ಎಂಬಾತನೊಂದಿಗೆ ಅಕ್ರಮ ಸಂಬಂಧ ಇತ್ತು. ಈ ಅಕ್ರಮ ಸಂಬಂಧ ವಿಚಾರ ವಿದ್ಯಾಳ ಪತಿ ಮಂಜುನಾಥನಿಗೆ ಗೊತ್ತಾಗಿ ವಿದ್ಯಾಳೊಂದಿಗೆ ಗಲಾಟೆ ಮಾಡಿರುತ್ತಾನೆ. ಇದರಿಂದ ಕುಪಿತಗೊಂಡ ವಿದ್ಯಾ, ತನ್ನ ಮತ್ತು ತನ್ನ ಪ್ರಿಯಕರ ಯೋಗೀಶನೊಂದಿಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಮಂಜುನಾಥನನ್ನು ಕೊಲೆ ಮಾಡಲು ಯೋಜಿಸುತ್ತಾಳೆ. ಅದರಂತೆ ವಿದ್ಯಾ ಮತ್ತು ಯೋಗೀಶ ಮತ್ತೊಬ್ಬ ಆರೋಪಿ ಗಿರೀಶ ಎಂಬಾತನೊಂದಿಗೆ ಸೇರಿಕೊಂಡು ಮಂಜುನಾಥನ ಕುತ್ತಿಗೆ ಹಿಸುಕಿ ಕೊಲೆ ಮಾಡುತ್ತಾರೆ. ಪ್ರಕರಣದ ಸಂಬಂಧ ಮಾಯಸಂದ್ರದ ಗಿರೀಶ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.