
ನಯನತಾರಾ ತಮಿಳು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿ. ಇವರು ನಟಿಸುವ ಚಿತ್ರಗಳಲ್ಲಿ ಹೀರೋ-ಹೀರೋಯಿನ್ ಪಾತ್ರಗಳು ಒಂದೇ ತೂಕ ಹೊಂದಿರುತ್ತವೆ. ಸದ್ಯ ಇವರ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಇಷ್ಟೊಂದು ಬೇಡಿಕೆ ಹೊಂದಿರುವ ಈ ನಟಿಗೆ ಮರುಹುಟ್ಟುಕೊಟ್ಟಿದ್ದು ಕನ್ನಡ ಚಿತ್ರರಂಗ ಎಂಬುದು ಅನೇಕರಿಗೆ ಗೊತ್ತಿಲ್ಲದ ವಿಚಾರ!
ಕಾಲಿವುಡ್ನಲ್ಲಿ ನಯನತಾರಾ ಭಾರಿ ಬೇಡಿಕೆಯ ನಟಿ. ಅಚ್ಚರಿ ಎಂದರೆ ಒಂದು ಕಾಲದಲ್ಲಿ ಅವರು ಸಿನಿಮಾ ಇಂಡಸ್ಟ್ರಿಯನ್ನೇ ತೊರೆಯಲಿದ್ದಾರೆ ಎನ್ನಲಾಗಿತ್ತು! ನಯನತಾರಾ ಹಾಗೂ ನಟ-ನಿರ್ದೇಶಕ ಪ್ರಭುದೇವ ನಡುವೆ ಪ್ರೀತಿ ಮೊಳೆತಿತ್ತು. ಅದಾಗಲೇ ಪ್ರಭುದೇವ ಅವರಿಗೆ ಬೇರೆ ಮದುವೆ ಆಗಿತ್ತು. ಆದರೆ, ಪ್ರೇಮ ವಿಚಾರ ಪ್ರಭುದೇವ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಮೊದಲ ಹೆಂಡತಿಗೆ ಅವರು ವಿಚ್ಛೇದನ ನೀಡಿದರು. ನಂತರ ಪ್ರಭುದೇವ-ನಯನತಾರಾ ಕೆಲ ಕಾಲ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು.
2010ರಲ್ಲಿ ಉಪೇಂದ್ರ ಅಭಿನಯದ ‘ಸೂಪರ್’ ಸಿನಿಮಾ ಮೂಲಕ ನಯನತಾರಾ ಕನ್ನಡಕ್ಕೆ ಕಾಲಿಟ್ಟರು. ಅಲ್ಲಿಯವರೆಗೆ ಯಶಸ್ಸು ಕಾಣಲು ಹವಣಿಸುತ್ತಿದ್ದ ನಯನತಾರಾ ಅದೃಷ್ಟ ಬದಲಾಯಿತು. ‘ಸೂಪರ್’ ಸಿನಿಮಾ ಯಶಸ್ಸು ತಂದುಕೊಡುತ್ತಿದ್ದಂತೆ ಅವರಿಗೆ ಒಳ್ಳೊಳ್ಳೆಯ ಕಥೆಗಳು ಬರಲು ಆರಂಭವಾದವು. ಈ ಮಧ್ಯೆ 2012ರಲ್ಲಿ ಪ್ರಭುದೇವ-ನಯನತಾರಾ ಸಂಬಂಧವೂ ಮುರಿದುಬಿತ್ತು.
ಕನ್ನಡ ಚಿತ್ರರಂಗದ ಮೂಲಕ ಮರುಹುಟ್ಟು ಪಡೆದುಕೊಂಡಿದ್ದ ನಯನತಾರಾಗೆ ಈ ವಿವಾದಗಳು ಹಿನ್ನಡೆ ಉಂಟು ಮಾಡಲೇ ಇಲ್ಲ. ಸಿನಿಮಾದಿಂದ ಸಿನಿಮಾಗೆ ಬೆಳೆಯುತ್ತಲೇ ಹೋದರು. ‘ರಾಜ ರಾಣಿ’, ‘ಆರಂಭಂ’ ‘ಥನಿ ಒರುವನ್’ ಸೇರಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು. ವರ್ಷಕ್ಕೆ ಅವರ ನಟನೆಯ 5-6 ಚಿತ್ರಗಳು ರಿಲೀಸ್ ಆದವು. ಈಗ ಅವರು ತಮಿಳಲ್ಲಿ ಲೇಡಿ ಸೂಪರ್ಸ್ಟಾರ್ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.
Comments are closed.