ಕರ್ನಾಟಕ

ಮಕ್ಕಳ ಮಧ್ಯಾಹ್ನದ ಊಟ ನೀಡಲು ಯೋಗ್ಯತೆ ಇಲ್ಲದ ಸರಕಾರಕ್ಕೆ ಈಗ ಪ್ರಾಧಿಕಾರ ರಚಿಸಲು ಹಣ ಎಲ್ಲಿಂದ ಬಂತು: ಸಿದ್ದರಾಮಯ್ಯ ಪ್ರಶ್ನೆ

Pinterest LinkedIn Tumblr

ಬೆಂಗಳೂರು: ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನವಾಗಿದೆ ಎಂದು ಕಿಡಿಕಾರಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಕ್ಕಳ ಮಧ್ಯಾಹ್ನದ ಊಟ ನೀಡಲು ಯೋಗ್ಯತೆ ಇಲ್ಲದ ಸರಕಾರಕ್ಕೆ ಈಗ ಪ್ರಾಧಿಕಾರಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ವೈಜ್ಙಾನಿಕ ಅಧ್ಯಯನವಿಲ್ಲದೆ ನಿಗಮ ಮಾಡುವುದು ಸರಿಯಲ್ಲ. ಅಂತಹ ನಿರ್ಧಾರ ಸಮಾಜ ವಿರೋಧಿಯಾಗುತ್ತದೆ. ಅಷ್ಟೇ ಅಲ್ಲದೇ ಅದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗುತ್ತದೆ ಎಂದಿದ್ದಾರೆ.

ಚುನಾವಣೆಯನ್ನು ಸಾಧನೆ ಬಲದಿಂದ ಗೆಲ್ಲೋಕೆ ಆಗದವರು, ಮತಿಹೀನ ಬಿಜೆಪಿ ಇಂತಹ ಅಗ್ಗದ ತಂತ್ರಕುತಂತ್ರದಿಂದ ಮಾಡುತ್ತಿದೆ. ಬಡತನ ನಿರ್ಮೂಲನೆ ವೈಜ್ಙಾನಿಕ ಅಧ್ಯಯನ ಆಧಾರಿತವಾಗಬೇಕು. ಪ್ರಾಮಾಣಿಕ ಕಾಳಜಿ ಇದ್ದರೆ ಜಾತಿಗಣತಿ ಒಪ್ಪಿಕೊಳ್ಳಿ ಎಂದು ಸಿದ್ದರಾಮಯ್ಯ ಅವರು ಮರಾಠ ಅಭಿವೃದ್ಧಿ ನಿಮಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನಮ್ಮ ವಿರೋಧವಿಲ್ಲ. ಬಡತನ ಜಾತಿ-ಧರ್ಮಗಳನ್ನು ಮೀರಿದ್ದು. ಕೇವಲ ತಳ ಸಮುದಾಯ ಮಾತ್ರವಲ್ಲ. ಮೇಲ್ಜಾತಿಗಳಲ್ಲೂ ಬಡವರಿದ್ದಾರೆ. ಎಲ್ಲಾ ಸಮುದಾಯಗಳಿಗೆ ರೂಪಿಸುವ ಕಾರ್ಯಕ್ರಮಕ್ಕೆ ಸ್ವಾಗತ. ಕ್ಷುಲ್ಲಕ ಬುದ್ಧಿಯ ಕಸರತ್ತುಗಳನ್ನು ಖಂಡಿಸುತ್ತೇನೆ. ಈಗ ಅನಗತ್ಯವಾಗಿ ಮರಾಠ ನಿಗಮ ಘೋಷಿಸಿದ್ದು ಏಕೆ? ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸಿದ್ದು ಏಕೆ? ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾದರೆ ಸರ್ಕಾರವೇ ಹೊಣೆ ಎಂದು ಪರೋಕ್ಷವಾಗಿ ಸರ್ಕಾರಕ್ಕೆ‌ ಎಚ್ಚರಿಕೆ ನೀಡಿದರು.

ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದ್ದೆವು. ಆಗ ಬಿಜೆಪಿಯವರು ನಮ್ಮನ್ನು ಜಾತಿವಾದಿಗಳು ಎಂದು ಬಿಂಬಿಸಿದರು. ಈಗ ಅವರು ಮಾಡುತ್ತಿರುವುದು ಏನು?. ಜಾತಿ, ಜಾತಿಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಭಾಷೆ ಭಾಷೆಗಳ ನಡುವೆಯೂ ದ್ವೇಷ ತಂದಿಟ್ಟಿದ್ದಾರೆ. ಇಂತಗ ತುಘಲಕ್ ನಿರ್ಧಾರದಿಂದ ಅರಾಜಕತೆ ಸೃಷ್ಟಿಯಾಗಿದೆ. ಮಕ್ಕಳ ಮಧ್ಯಾಹ್ನದ ಊಟ ನೀಡೋಕೆ ಯೋಗ್ಯತೆಯಿಲ್ಲ. ವಿಧವಾ ವೇತನ, ಅಂಗವಿಕಲ ವೇತನಕ್ಕೆ ದುಡ್ಡಿಲ್ಲ. ಕೊರೋನಾ ಸೋಂಕಿನಿಂದ ಜ‌ನ ಸಾಯುತ್ತಿದ್ದಾರೆ. ಪ್ರವಾಹದಿಂದ ಜನ ಬೀದಿಗೆ ಬಿದ್ದು ಒದ್ದಾಡುತ್ತಿದ್ದಾರೆ. ಇವೆಲ್ಲಕ್ಕೂ ಸರ್ಕಾರದ ಬಳಿ ಹಣವಿಲ್ಲ. ಈಗ ನಿಗಮ, ಪ್ರಾಧಿಕಾರಕ್ಕೆ ದುಡ್ಡು‌ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

Comments are closed.