ಕರ್ನಾಟಕ

ಮರಾಠಿ ಪ್ರಾಧಿಕಾರ-ರಾಜ್ಯದಲ್ಲಿ ಬಲವಂತದ ಬಂದ್ ನಡೆಸಿದರೆ ಕಠಿಣ ಕ್ರಮ: ಸಿಎಂ ಬಿ.ಎಸ್.ವೈ ಎಚ್ಚರಿಕೆ

Pinterest LinkedIn Tumblr

ಬೆಂಗಳೂರು: ಮರಾಠ ಪ್ರಾಧಿಕಾರ ರಚನೆಗೆ ಆದೇಶ ನೀಡಿದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು ಬಲವಂತದಿಂದ ಬಂದ್ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮಹಾಜನ್ ತೀರ್ಪು ಅಂತಿಮ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಮರಾಠಿಗರು ಸಹ ನಮ್ಮ ರಾಜ್ಯದ ಕನ್ನಡಿಗರೇ. ಇದು ಮರಾಠಾ ಅಭಿವೃದ್ಧಿಗಾಗಿ ಮಾಡಿರುವ ಪ್ರಾಧಿಕಾರ. ಮರಾಠಿಗರು ಕೂಡ ಕಟ್ಟ ಹಿಂದುತ್ವ ವಾದಿಗಳು. ಬೆಳಗಾವಿಯ ವಿಶ್ವಸಮ್ಮೇಳನದಲ್ಲೂ ಅವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಿ.5 ರಂದು ಬಂದ್ ಮಾಡುವ ಅಗತ್ಯವಿಲ್ಲ. ಬಲವಂತದಿಂದ ಬಂದ್ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೀದರ್ ಜಿಲ್ಲೆ, ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರಾಠಿಗರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ಧಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿರುವ ಕನ್ನಡ ಸಂಘಟನೆಗಳು ಈ ತೀರ್ಮಾನವನ್ನು ಹಿಂಪಡೆಯಲು ನ.27ರವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದು, ಅಷ್ಟರೊಳಗೆ ನಿರ್ಧಾರ ಹಿಂಪಡೆಯದೇ ಹೋದರೆ ಡಿ.5ರಂದು ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಕೊಟ್ಟ ಹೇಳಿಕೆಯೂ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

Comments are closed.