
ಬೆಂಗಳೂರು: ಹಂಪಿಯ ಹೊರವಲಯದಲ್ಲಿ ವಿಶ್ವದ ಅತೀ ಎತ್ತರದ ಹನುಮಂತನ ಪ್ರತಿಮೆಯನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾದ ಸ್ವಾಮಿ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ನಿನ್ನೆ ಅವರು ಅಯೋಧ್ಯೆ(Ayodhya)ಯ ರಾಮಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾದ ಬಳಿಕ ಇದನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕದ ಬಳ್ಳಾರಿಯಲ್ಲಿರುವ ಪಂಪಾಪುರದಲ್ಲಿ 215 ಮೀಟರ್ ಎತ್ತರದ ಹನುಮನ ವಿಗ್ರಹ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕೆ ಅಂದಾಜು 1,200 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಕುರಿತು ಮಾತನಾಡಿದ ಅವರು, 215 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 1,200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಹನುಮಂತನ ಪ್ರತಿಮೆಯಾಗಲಿದೆ. ಬಳ್ಳಾರಿಯ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರಾದ್ಯಂತ ರಥಯಾತ್ರೆ ಮಾಡುವ ಮೂಲಕ ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಅಯೋಧ್ಯೆಯಲ್ಲಿ ಶ್ರೀ ರಾಮನ ಬೃಹತ್ ಪ್ರತಿಮೆ ನಿರ್ಮಿಸಲಾಗುತ್ತಿದೆ. ಇದು 221 ಮೀಟರ್ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಆಗಿರಲಿದೆ. ಹನುಮಂತನ ಪ್ರತಿಮೆ ರಾಮನದಕ್ಕಿಂತ ದೊಡ್ಡದಿರುವುದು ಬೇಡವೆಂದು ಹಂಪಿಯಲ್ಲಿ ತುಸು ಕಡಿಮೆ ಎತ್ತರದ ಹನುಮಂತನ ಪ್ರತಿಮೆ ನಿರ್ಮಿಸಲು ಯೋಜಿಸಲಾಗಿದೆ.
Comments are closed.