
ಬೆಂಗಳೂರು: ಪೊಲೀಸರ ಹೆಸರಿನಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಲ್ಲಿ ನಾಲ್ವರು ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಿನ್ನಾಭರಣಗಳನ್ನು ಪಾಲಿಷ್ ಮಾಡುವ ಗೀತಾ ಜ್ಯುವೆಲರ್ಸ್ಗೆ ನುಗ್ಗಿದ ನಕಲಿ ಪೊಲೀಸರು ಆ ಮಳಿಗೆಯನ್ನು ರೇಡ್ ಮಾಡುತ್ತಿರುವುದಾಗಿ ಹೆದರಿಸಿ, ದರೋಡೆ ಮಾಡಿದ್ದಾರೆ.
ಬೆಂಗಳೂರಿನ ಹಲಸೂರು ಗೇಟ್ ನಗರ್ತಪೇಟೆಯಲ್ಲಿ ನವೆಂಬರ್ 11ರಂದು ಈ ಘಟನೆ ನಡೆದಿದೆ. ಚಿನ್ನಾಭರಣ ಪಾಲಿಷ್ ಮಾಡುವ ಗೀತಾ ಜುವೆಲ್ಲರ್ಸ್ಗೆ ನುಗ್ಗಿದ ನಕಲಿ ಪೊಲೀಸರು ದೀಪಾವಳಿ ಹಬ್ಬಕ್ಕೆ ನಕಲಿ ಚಿನ್ನ ಮಾರಾಟ ಮಾಡುತ್ತಿದ್ದೀರ. ಹೀಗಾಗಿ, ನಿಮ್ಮ ಅಂಗಡಿ ಮೇಲೆ ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ. ನಾವು ಪೊಲೀಸರು, ನಿಮ್ಮ ಅಂಗಡಿ ಮೇಲೆ ರೇಡ್ ಮಾಡಲು ಬಂದಿದ್ದೇವೆ ಎಂದು ಹೇಳಿದ್ದ ಕಳ್ಳರು ಕೊಲ್ಕತ್ತಾದಲ್ಲಿದ್ದ ಜ್ಯುವೆಲರ್ಸ್ ಮಳಿಗೆಯ ಮಾಲೀಕನಿಗೆ ಫೋನ್ ಮಾಡಿದ್ದರು.
ನಿಮ್ಮ ಅಂಗಡಿಯನ್ನು ರೇಡ್ ಮಾಡಿದ್ದೇವೆ. ಕೂಡಲೇ ಪೊಲೀಸ್ ಠಾಣೆಗೆ ಬನ್ನಿ ಎಂದು ನಕಲಿ ಪೊಲೀಸರು ಫೋನ್ ಮಾಡಿದ್ದರು. ಆ ಮಾತನ್ನು ನಂಬಿ ಕೊಲ್ಕತ್ತಾದಿಂದ ಬಂದ ಜ್ಯುವೆಲರ್ಸ್ ಮಾಲೀಕ ಕಾರ್ತಿಕ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಿಚಾರಿಸಿದ್ದರು. ಆದರೆ, ಪೊಲೀಸರು ಆ ರೀತಿ ಯಾವ ರೇಡ್ ಕೂಡ ನಡೆದಿಲ್ಲ ಎಂದಿದ್ದರು. ಆಗ ಅನುಮಾನದಿಂದ ಅಂಗಡಿಗೆ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಗೀತಾ ಜ್ಯುವೆಲರ್ಸ್ನಿಂದ 800 ಗ್ರಾಂನಷ್ಟು ಚಿನ್ನಾಭರಣಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ.
ಬಳಿಕ, ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕಾರ್ತಿಕ್ ದೂರು ನೀಡಿದ್ದಾರೆ. ದೂರಿನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಪತ್ತೆ ಹಚ್ಚಲು ಹಲಸೂರು ಗೇಟ್ ಪೊಲೀಸರು ಶೋಧ ನಡೆಸಿದ್ದರು. ಸದ್ಯ ಕಾರಿನ ನಂಬರ್ ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ. ನಾಗಮಂಗಲ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಿಬ್ಬರು ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Comments are closed.