ಬೆಂಗಳೂರು; ದೀಪಾವಳಿ ಬಂದರೂ ಕಳೆದ ತಿಂಗಳ ವೇತನ ಈವರೆಗೆ ಬಾರದ ಹಿನ್ನೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ಸಾರಿಗೆ ಇಲಾಖೆಯ ಸಿಬ್ಬಂದಿಗಳು ವೇತನಕ್ಕಾಗಿ ಕಾಯುತ್ತಿದ್ದಾರೆ.
ಕೊರೋನಾ ವೈರಸ್ ಸಂದಿಗ್ಧತೆಯ ಮಧ್ಯೆ ಈ ಬಾರಿ ಹಿಂದುಗಳ ಅತಿ ದೊಡ್ಡ ಹಬ್ಬ ದೀಪಾವಳಿ ಆಚರಿಸಲಾಗುತ್ತಿದೆ. ಆದರೆ ಅಕ್ಟೋಬರ್ ತಿಂಗಳು ಕಳೆದ ನವೆಂಬರ್ ಅರ್ಧ ತಿಂಗಳು ಮುಗಿದರೂ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ವೇತನವಾಗಿಲ್ಲ. ಇದರಿಂದಾಗಿ ದೀಪಾವಳಿ ಹಬ್ಬ ಬಂದರೂ ಸಾರಿಗೆ ಇಲಾಖೆ ಸಿಬ್ಬಂದಿ ಸಂಬಳ ಸಿಗದೆ ಸಾಲ ಮಾಡಿ ಹಬ್ಬ ಮಾಡಬೇಕಾಗಿದರ. ಇದು KSRTC ಸಿಬ್ಬಂದಿಗಳಿಗೆ ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯದ ಹಬ್ಬವಾಗಿ ಮಾರ್ಪಾಟಾಗಿದೆ.
ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಮ್ಮ ಜಿಲ್ಲೆಯ ಪಾಲಿಟಿಕ್ಸ್ ನಲ್ಲಿ ಬ್ಯುಸಿ ಇದ್ದಾರೆ. ಹಬ್ಬ ಇರುವುದು ಗೊತ್ತಿದ್ದು, ಮುಂಚೆ ಅಧಿಕಾರಿಗಳು ಮುತುವರ್ಜಿ ವಹಿಸಿದ್ದರೆ ಸಾರಿಗೆ ಸಿಬ್ಬಂದಿಗೆ ವೇತನ ಕೊಡಿಸಬಹುದಿತ್ತು. ಹಬ್ಬ ಇದ್ರೂ ಇನ್ನೂ ಸಂಬಳದ ಭಾಗ್ಯ ಕರುಣಿಸದ ಸಾರಿಗೆ ನಿಗಮಗಳ ನಿರ್ಲಕ್ಷ್ಯದ ಬಗ್ಗೆ ಸಿಬ್ಬಂದಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನ್ಯೂಸ್ 18 ಜೊತೆ ತಮ್ಮ ನೋವು ಹಂಚಿಕೊಂಡರು. ಬೆಳಕಿನ ಹಬ್ಬಕ್ಕೂ ಕತ್ತಲೆಯಲ್ಲಿರುವ ಸಾರಿಗೆ ನೌಕರರು ಈ ಹಿಂದೆ ಕಚೇರಿ ಸಿಬ್ಬಂದಿಗಳಿಗೆ ಒಂದನೇ ತಾರೀಖಿನಂದೆ ಸಂಬಳವಾಗ್ತಿತ್ತು. ನಾಲ್ಕರಂದು ಡಿಪೋ ಮೆಕ್ಯಾನಿಕ್ಸ್, ಏಳನೇ ತಾರೀಖಿನಂದು ಡ್ರೈವರ್ ಕಂಡಕ್ಟರ್ ಗಳಿಗೆ ಸಂಬಳವಾಗುತ್ತಿತ್ತು. ಆದರೆ ಈ ಬಾರಿ 14ನೇ ತಾರೀಖಾದ್ರು ಸಂಬಳವಾಗಿಲ್ಲ. ಅದೇ ರೀತಿ ಬಿಎಂಟಿಸಿ ಸಿಬ್ಬಂದಿಗೂ ಸಂಬಳ ಆಗಿಲ್ಲ.
KSRTC, BMTC NEKRTC ಹಾಗೂ NEKRTC ಸೇರಿ 1 ಲಕ್ಷದ 30 ಸಾವಿರ ನೌಕರರು ಹಾಗೂ ಸಿಬ್ಬಂದಿಗಳಿದ್ದಾರೆ. ಜವಾನನಿಂದ ಎಂಡಿವರೆಗೆ ವೇತನವಾಗಿಲ್ಲ. ಕೋವಿಡ್ ನಿಂದಾಗಿ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸರ್ಕಾರಕ್ಕೆ ಮೂರು ತಿಂಗಳ ವೇತನಕ್ಕೆ ಮನವಿ ಮಾಡಲಾಗಿದೆ. ಹಬ್ಬದೊಳಗೆ ವೇತನ ನೀಡಲು ಪ್ರಯತ್ನಿಸಲಾಗುವುದು ಎಂದು ನ್ಯೂಸ್ 18 ಸಾರಿಗೆ ಇಲಾಖೆ ಎಂಡಿ ಶಿವಯೋಗಿ ಕಳಸದ್ ಪ್ರತಿಕ್ರಿಯೆ ನೀಡಿದರು.
ಕೋವಿಡ್ ಕಾರಣದಿಂದ ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಸರಿಯಾದ ಸಮಯಕ್ಕೆ ಸಂಬಳವಾಗ್ತಿಲ್ಲ. ಕಳೆದ ಮೂರು ತಿಂಗಳ ವೇತನವನ್ನು ಸರ್ಕಾರದಿಂದ ಸಾರಿಗೆ ಇಲಾಖೆ ಬಿಡುಗಡೆ ಮಾಡಿತ್ತು. ಇದೀಗ ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ವರೆಗೆ ಮತ್ತೆ ಮೂರು ತಿಂಗಳ ವೇತನವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹಣಕಾಸು ಇಲಾಖೆಯಲ್ಲಿ ಒಪ್ಪಿಗೆ ದೊರೆತ ನಂತರವಷ್ಟೇ ಸಾರಿಗೆ ಸಿಬ್ಬಂದಿಗೆ ದೊರೆಯಲಿದೆ. ಕೋವಿಡ್ ಬಳಿಕ ಸಂಬಳಕ್ಕೆ ಸರ್ಕಾರವನ್ನೇ ನೆಚ್ಚಿಕೊಂಡಿರುವ ಸಾರಿಗೆ ನಿಗಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಿಬ್ಬಂದಿ ತಮ್ಮ ನೋವು ತೋಡಿಕೊಂಡಿದ್ದಾರೆ.