ಕರ್ನಾಟಕ

ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಹೇಳಿದ್ದ ಸಿದ್ದರಾಮಯ್ಯಗೆ ಬಿಜೆಪಿ ಕೊಟ್ಟ ಖಡಕ್ ಉತ್ತರೆವೇನು ನೋಡಿ….

Pinterest LinkedIn Tumblr

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಟ್ವೀಟ್ ಮಾಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಖಡಕ್​ ಆಗಿಯೇ ಉತ್ತರ ನೀಡಿರುವ ಬಿಜೆಪಿ ಘಟಕ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

ನಳಿನ್ ಕುಮಾರ್​ ಕಟೀಲ್​ ವಿರುದ್ಧ ಸರಣಿ ಟ್ವೀಟ್​ಗಳ ಮೂಲಕ ಇಂದು ಟೀಕಾಸ್ತ್ರ ಪ್ರಯೋಗಿಸಿದ್ದ ಸಿದ್ದರಾಮಯ್ಯ, “ಆತನೋರ್ವ ಕಾಡು ಮನುಷ್ಯ, ಮಂಗಳೂರಿನಲ್ಲಿ ಬೀದಿ ಬೀದಿ ಅಲೆಯುತ್ತಿದ್ದವನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ” ಎಂದು ಕಿಡಿಕಾರಿದ್ದರು.

ಸಿದ್ದರಾಮಯ್ಯ ಅವರ ಈ ಟ್ವೀಟ್​ಗೆ ಖಡಕ್​ ಆಗಿಯೇ ಉತ್ತರ ನೀಡಿರುವ ಬಿಜೆಪಿ ಘಟಕ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ, “ಮಾನ್ಯ ಸಿದ್ದರಾಮಯ್ಯ ನೀವು ಬಳಸುತ್ತಿರುವ ಪದಗಳೇ ಯಾರು ʼಕಾಡು ಮನುಷ್ಯʼ ಎಂಬುದನ್ನು ಸಾಬೀತು ಪಡಿಸುತ್ತಿದೆ. ಕಾಡುಮನುಷ್ಯ, ನಾಲಾಯಕ್‌, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಕಾಂಗ್ರೆಸ್​ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ನೀವು ಕಾಂಗ್ರೆಸ್​ ಪಕ್ಷದ ವಿದೂಷಕ ಇದ್ದ ಹಾಗೆ ಹಾಗಿದೆ” ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.

ನಿನ್ನೆ ಆರ್​ಆರ್​ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ್ದ ನಳಿನ್ ಕುಮಾರ್​ ಕಟೀಲ್ ಕಾಂಗ್ರೆಸ್​ ನಾಯಕರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರನ್ನು ಉಲ್ಲೇಖಿಸಿ “ಹುಲಿಯಾ ಕಾಡಿಗೆ, ಬಂಡೆ ಛಿದ್ರ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇಂದು ಟ್ವಿಟರ್​ನಲ್ಲಿ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, “ನಳಿನ್ ಕುಮಾರ್​ ಕಟೀಲ್​ ಓರ್ವ ಕಾಡು ಮನುಷ್ಯ. ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಅವರಿಗೆ ಸ್ವಲ್ಪ ಬುದ್ದಿ ಹೇಳಿ ನಾಲಿಗೆ ಬಿಗಿಹಿಡಿದು ಮಾತನಾಡಲು ಕಲಿಸಿ. ಇಲ್ಲದೆ ಇದ್ದರೆ ಇವರೊಬ್ಬರೇ ಸಾಕು ಎಲ್ಲರ ಮಾನ ಕಳೆಯಲು” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಸರಣಿ ಟ್ವೀಟ್​ ಮೂಲಕ ಸಿದ್ದರಾಮಯ್ಯ ಕಾಲೆಳೆದಿರುವ ಬಿಜೆಪಿ, “ಮಾನ್ಯ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವಲ್ಲವೇ? ಈ ಹಿಂದಿನ ಉಪಚುನಾವಣೆಯಲ್ಲಿ ನಳಿನ್ ಕುಮಾರ್​ ಕಟೀಲ್ ಅವರ ನಾಯಕತ್ವದಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿಎಸ್​ವೈ ಮತ್ತು ಬಿಜೆಪಿ ಗದ್ದುಗೆ ಬಲಪಡಿಸಿದ್ದೇವೆ. ಈ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ” ಎಂದು ತಿರುಗೇಟು ನೀಡಲಾಗಿದೆ.

ಮತ್ತೊಂದು ಟ್ವೀಟ್​ನಲ್ಲಿ, “ಬಾದಾಮಿಯ ಶಾಸಕ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು 2019 ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದರು. ಜನತೆ ನಿಮ್ಮ ಬೆನ್ನುಮೂಳೆ ಮುರಿದ ಇತಿಹಾಸ ನೆನಪಿಸಿಕೊಳ್ಳಿ, ಗೆದ್ದದ್ದು ಕೇವಲ 1,696 ಮತಗಳಿಂದ!. ಸ್ವಲ್ಪ ವ್ಯತ್ಯಾಸ ಆಗಿದ್ದರೂ ನೀವು ಕಾಡುಮನುಷ್ಯರಂತೆ ಜೀವನ ಮಾಡಬೇಕಿತ್ತು!

ಮಾನ್ಯ ಸಿದ್ದರಾಮಯ್ಯ ನವರೇ, ಕಾಂಗ್ರೆಸ್ ಸೇರುವುದುಕ್ಕೂ ಮುನ್ನ ಮೊದಲು ಜೆಡಿಎಸ್ ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೇ ನಾಮ ಹಾಕಿದ ಮಹಾನುಭಾವರು ನೀವೇ ಅಲ್ಲವೇ? ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನ ಸಿಗುವುದೆಂದು ನೀವೇ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ಬರೆಯಲಾಗಿದೆ.

ಚಾಮುಂಡಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನ್ನು ಉಲ್ಲೇಖಿಸಿ, “ಮಾನ್ಯ ಸಿದ್ದರಾಮಯ್ಯ ಅವರೇ, ಜನರ ಭಾವನೆಗೆ ಸ್ಪಂದಿಸದ ನಿಮ್ಮನ್ನು ಸ್ವಕ್ಷೇತ್ರ ಚಾಮುಂಡೇಶ್ವರಿಯ ಮತದಾರರು ʼಬೀದಿಯಲ್ಲಿ ಅಲೆಯುವಂತೆʼ ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ. ಕಾಂಗ್ರೆಸ್‌ ಪಕ್ಷದಲ್ಲಿ ನಿಮ್ಮ ಸ್ಥಿತಿ ಉಗುರು ಮತ್ತು ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿಯಂತಾಗಿದೆ” ಎಂದು ಅಪಹಾಸ್ಯ ಮಾಡಲಾಗಿದೆ.

Comments are closed.