ಕರ್ನಾಟಕ

ಇಂದು ದಸರಾ ಉದ್ಘಾಟನೆ: ಜನತೆಗೆ ದಸರಾ ಶುಭಾ ಕೋರಿದ ಮುಖ್ಯಮಂತ್ರಿಗಳು

Pinterest LinkedIn Tumblr


ಮೈಸೂರು: ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ.ಮಂಜುನಾಥ್ ಇಂದು ಬೆಳಗ್ಗೆ ದಸರಾ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಗಳು ನಗರಕ್ಕೆ ಬಂದಿಳಿದಿದ್ದು, ಸಿದ್ದತಾ ಕಾರ್ಯಕ್ರಮಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಜನರಿಗೆ ದಸರಾ ಶುಭಾಶಯವನ್ನು ಕೋರಿದ್ದಾರೆ. ಜನರ ಅಪೇಕ್ಷೆಯಂತೆ ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ. ಕೊರೋನಾ ನಡುವೆಯೂ ಸಾಂಪ್ರದಾಯಿಕ ನಾಡಹಬ್ಬ ಆಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ದಸರಾ ಆಚರಣೆ ಕುರಿತು ಇಂದು ಮುಖ್ಯಮಂತ್ರಿಗಳು ಇಂದು ಸಂಜೆ ಸಭೆ ನಡೆಸಲಿದ್ದಾರೆ. ನಗರದ ಸರ್ಕಾರಿ ಭವನದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಲಿದ್ದಾರೆ. ಈ ವೇಳೆ ಜಿಲ್ಲಾಡಳಿತ ನಡೆಸಿರುವ ಸಿದ್ದತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಹಾಗೂ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವ ಎಸ್‌ಟಿ ಸೋಮಶೇಖರ್, ಸಂಸದ ಪ್ರತಾಪ್‌ ಸಿಂಹ, ಶಾಸಕರು ಸೇರಿದಂತೆ ಅಧಿಕಾರಿಗಳ ಉಪಸ್ಥಿತರಿರಲಿದ್ದಾರೆ.

ಸಭೆ ಬಳಿಕ ಇಂದು ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿರುವ ಅವರು, ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಅಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಿಎಂ ಬೆಂಗಳೂರಿಗೆ ಮರಳಲಿದ್ದಾರೆ.

ವಿಶೇಷ ವಿಮಾನದ ಮೂಲಕ ನಗರಕ್ಕೆ ಬಂದಿಳಿದ ಸಿಎಂ, ರಾಜ್ಯದಲ್ಲಿ‌ ನೆರೆ ವಿಚಾರ ಕುರಿತು ಮಾತನಾಡಿದರು. ಕಲ್ಯಾಣ ಕರ್ನಾಟಕದಲ್ಲಿ ಭೀಕರ ಪ್ರವಾಹ ಎದುರಾಗಿದೆ. ನಾನು ಕೂಡ ಎರಡು ಮೂರು ದಿನ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ಅಲ್ಲಿನ ಪರಿಸ್ಥಿತಿ ಕುರಿತು ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ‌ ಮಾಹಿತಿ ಪಡೆದಿದ್ದೇನೆ. ನಮ್ಮ ಸಚಿವರು ಕೆಲವರು ಹೋಗಿದ್ದಾರೆ. ಇನ್ನು ಕೆಲವರು ಹೋಗುತ್ತಾರೆ. ಜನರ ಜೊತೆ ಸರ್ಕಾರ ಇದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತೇವೆ. ಹಣದ ಕೊರತೆ ಇಲ್ಲ,ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ರಾಜ್ಯದ ಎರಡು ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಎರಡು ಕ್ಷೇತ್ರವನ್ನ ನಾವು ಈಗಾಗಲೇ ಗೆದ್ದಿದ್ದೇವೆ. ಗೆಲುವಿನ ದೊಡ್ಡ ಅಂತರಕ್ಕಾಗಿ ಈಗ ಶ್ರಮಿಸುತ್ತಿದ್ದೇವೆ. ಗೆಲುವಿನಲ್ಲಿ ಯಾವ ಅನುಮಾನಗಳು ಇಲ್ಲ. ಜನ ನಮ್ಮ‌ ಪರವಾಗಿದ್ದಾರೆ ಎಂದರು.

Comments are closed.