ಕರ್ನಾಟಕ

ವಿದ್ಯಾಗಮ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ!

Pinterest LinkedIn Tumblr


ಕಲಬುರಗಿ: ಅಫಜಲಪುರ ತಾಲೂಕಿನ ಮಾಶಾಳದಲ್ಲಿ ವಿದ್ಯಾಗಮ ಅಡಿ ನಡೆಯುತ್ತಿರುವ ವಠಾರ ಶಾಲೆಯ ನಾಲ್ವರು ಮಕ್ಕಳಿಗೆ ಕೊರೋನಾ ಧೃಢಪಟ್ಟಿದೆ.

ಈ ಹಿನ್ನೆಲೆ ಶಾಲೆಯನ್ನು 2 ವಾರ ಸೀಲ್‍ಡೌನ್ ಮಾಡಲಾಗಿದೆ. ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ನಡೆಯುತ್ತಿರುವ 5 ವಠಾರ ಶಾಲೆಯ ಒಟ್ಟು 207 ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಈ ಪೈಕಿ 5 ನೇ ತರಗತಿಯಿಂದ 8 ನೇ ತರಗತಿಯ 4 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 24 ವಿದ್ಯಾರ್ಥಿಗಳ ಕೋವಿಡ್ ವರದಿ ಬರಬೇಕಾಗಿದೆ. 20 ದಿವಸಗಳ ಹಿಂದೆ ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕಕ್ಕೆ ಬಂದ ಶಾಲೆಯ ಮುಖ್ಯ ಗುರುಗಳಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.

ಅವರು ಕಲಬುರಗಿ ಜಿಮ್ಸ್‌ ಆಸ್ಪತ್ರೆಯಲ್ಲಿ 20 ದಿನ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿದ್ದಾರೆ. ಬಿಇಓ ಚಿತ್ರಶೇಖರ ದೇಗಲಮಡಿ ಅವರು ಭೇಟಿ ನೀಡಿದ್ದು, 15 ದಿವಸಗಳವರೆಗೆ ವಠಾರ ಶಾಲೆ ಬಂದ್ ಮಾಡಿ ಎಂದು ಆದೇಶಿಸಿದ್ದಾರೆ. ವಠಾರ ಶಾಲೆಯ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿರಿ ಎಂದು ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ, ಆದರೆ ಮಾಶಾಳದಲ್ಲಿ ಮುಖ್ಯಗುರು ಸೋಂಕಿತರ ಸಂಪರ್ಕಕ್ಕೆ ಬಂದು ಕೋವಿಡ್ ಧೃಢಪಟ್ಟಿದ್ದರಿಂದ ಎಲ್ಲ ಮಕ್ಕಳಿಗೆ ಪರೀಕ್ಷೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಕೇವಲ 5 ವಠಾರ ಶಾಲೆಯ ವಿದ್ಯಾರ್ಥಿಗಳನ್ನು ಮಾತ್ರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನುಳಿದ ವಠಾರ ಶಾಲೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಇದರಿಂದ ಹೆದರಿ ತಮ್ಮ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಹೆದರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

Comments are closed.