ಕರ್ನಾಟಕ

ಮಾಜಿ ಸಚಿವ, ಖ್ಯಾತ ಕುಸ್ತಿಪಟು ರೇವುನಾಯಕ ಬೆಳಮಗಿಯನ್ನೇ ಹೈರಾಣಾಗಿಸಿದ ಕೊರೋನಾ

Pinterest LinkedIn Tumblr


ಕಲಬುರ್ಗಿ: ಮಾಜಿ ಸಚಿವ ಹಾಗೂ ಖ್ಯಾತ ಕುಸ್ತಿ ಪಟು ರೇವು ನಾಯಕ ಬೆಳಮಗಿ ಕೊರೋನಾಕ್ಕೆ ಹೈರಾಣಾಗಿದ್ದಾರೆ. ಹಾಸಿಗೆಯಲ್ಲಿಯೇ ರೇವೂನಾಯಕ್ ಬೆಳಮಗಿ ಕಣ್ಣೀರು ಹಾಕಿದ್ದಾರೆ. ಗಂಟಲಿನಲ್ಲಿ ಉಸಿರು ಕಟ್ಟಿದಂತಾಗುತ್ತದೆ. ಎದೆಯಲ್ಲಿ ಉಸಿರು ನಿಂತಂತಾಗುತ್ತದೆ. ಭಯಂಕರ ತ್ರಾಸ್ ಆಗ್ತಿದೆ. ನನಗಾಗಿದ್ದು ಆಗಿದೆ, ನಿಮಗಾರಿಗೂ ಕೊರೋನಾ ಆಗಬಾರದು. ಕೈ ಜೋಡಿಸಿ ಕೇಳುತ್ತೇನೆ ಎಂದಿದ್ದಾರೆ.

ಯಾರೂ ನನ್ನ ಭೇಟಿ ಮಾಡಲು ಬರಬೇಡಿ. ಆ ದೇವಿಯಲ್ಲಿ ಪ್ರಾಥಿಸಿದ್ದೇನೆ. ಮನೆಯವರೂ ಎಲ್ಲ ದೇವರಲ್ಲಿ ಬೇಡಿಕೊಂಡಿದ್ದಾರೆ. ಎಲ್ಲರ ಆಶೀರ್ವಾದ ನನಗಿರಲಿ ಸಾಕು. ನೀವ್ಯಾರು ಮನೆಗೆ ಬರೋದು ಬೇಡವೆಂದು ಅಭಿಮಾನಿಗಳಿಗೆ ಬೆಳಮಗಿ ಮನವಿ ಮಾಡಿದ್ದಾರೆ. ಕಲಬುರ್ಗಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ರೇವೂ ನಾಯಕ್, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಹತ್ತಾರು ಕುಸ್ತಿಪಟುಗಳನ್ನ ಕೆಡವಿದ ಗಂಡುಗಲಿಗೆ ಈಗ ಬೆಡ್ ರೆಸ್ಟ್ ಆಗಿದ್ದಾನೆ. ಕೊರೋನಾದಿಂದ ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಳಮಗಿ ಮನೆಗೆ ಬಂದಿದ್ದಾರೆ.

ನೆಗೆಟಿವ್ ಬಂದ ನಂತರ ಡಿಸ್ಚಾರ್ಜ್ ಆಗಿ ಬಂದಿದ್ದರು. ಆದರೆ ಮನೆಗೆ ಬಂದ ನಂತರ ಬೆಳಮಗಿಗೆ ಮತ್ತೆ ತೀವ್ರ ಉಸಿರಾಟ ತೊಂದರೆಯಾಗಿದೆ ಎನ್ನಲಾಗಿದೆ. ಹೀಗಾಗಿ ಆಕ್ಸಿಜನ್ ನೆರವಿನೊಂದಿಗೆ ಕಲಬುರ್ಗಿಯಲ್ಲಿನ ತಮ್ಮ ನಿವಾಸದಲ್ಲಿಯೇ ರೇವುನಾಯಕ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ತಿಳಿದು ಕೆಲ ಅಭಿಮಾನಿಗಳು ಮನೆಗೆ ಬಂದು ಆರೋಗ್ಯ ವಿಚಾರಿಸುತ್ತಿದ್ದಾರೆ.

ನಿತ್ಯ ನೂರಾರು ಜನ ಬಂದು ನನ್ನ ಆರೋಗ್ಯ ವಿಚಾರಿಸಲು ಯತ್ನಿಸುತ್ತಿದ್ದಾರೆ. ಇದರಿಂದಾಗಿ ಅವರಿಗೂ ತೊಂದರೆಯಾಗಲಿದೆ. ಹೀಗಾಗಿ ಯಾರೂ ತಮ್ಮ ಮನೆಗೆ ಬರಬೇಡಿ ಎಂದು ಬೆಂಬಲಿಗರಿಗೆ ಮನವಿ ಮಾಡುವಾಗ ಗದ್ಗರಿತನಾಗಿ ಬೆಳಮಗಿ ಕಣ್ಣೀರು ಹಾಕಿದ್ದಾರೆ.

ಕಲ್ಯಾಣ ಕರ್ನಾಟಕದ ಖ್ಯಾತ ಕುಸ್ತಿಪಟುವಾಗಿದ್ದ ರೇವು ನಾಯಕ ಬೆಳಮಗಿ, ಕಮಲಾಪುರ ಕ್ಷೇತ್ರದಿಂದ ಬಿಜೆಪಿಯಿಂದ ತಮ್ಮ ರಾಜಕೀಯ ಆರಂಭಿಸಿದ್ದರು. ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ನೀಡದೇ ಇದ್ದಾಗ ಜೆಡಿಎಸ್ ಗೆ ಪಕ್ಷಾಂತರ ಮಾಡಿ ಕಲಬುರ್ಗಿ ಗ್ರಾಮೀಣ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದರು.

ಚುನಾವಣೆಯಲ್ಲಿ ಸೋತ ನಂತರ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರಿಗೂ ಕೊರೋನಾ ಬಂದಿದ್ದು, ಚಿಕಿತ್ಸೆ ಪಡೆದ ನಂತರ ನೆಗೆಟಿವ್ ಆಗಿದ್ದರೂ ಉಸಿರಾಟದ ತೊಂದರೆ ಕಾರಣದಿಂದಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಆಗುತ್ತಿರುವ ಯಮಯಾತನೆ ನೆನೆಸಿಕೊಂಡು ಖ್ಯಾತ ಕುಸ್ತಿಪಟು ಕಣ್ಣೀರು ಹಾಕಿದ್ದಾರೆ.

Comments are closed.