ಗಲ್ಫ್

ರಿಲಾಯನ್ಸ್ ರೀಟೇಲ್​ನಲ್ಲಿ 6,247 ಕೋಟಿ ಪಾಲು ಖರೀದಿಸಿದ ಅಬುಧಾಬಿಯ ಮುಬಾದಲ ಕಂಪನಿ

Pinterest LinkedIn Tumblr


ಮುಂಬೈ: ರಿಲಾಯನ್ಸ್ ರೀಟೇಲ್ ಸಂಸ್ಥೆಯಲ್ಲಿ ಅಬುಧಾಬಿ ಸರ್ಕಾರಿ ಪ್ರಾಯೋಜಿತ ಮುಬದಾಲ ಇನ್ವೆಸ್ಟ್​ಮೆಂಟ್ ಕಂಪನಿಯಿಂದ 6,247.50 ಕೋಟಿ ರೂ ಹೂಡಿಕೆ ಆಕರ್ಷಿಸಿದೆ.

ಈ ಹೂಡಿಕೆಯೊಂದಿಗೆ ಮುಬಾದಲಾ ರಿಲಾಯನ್ಸ್ ರೀಟೇಲ್​ನ ಶೇ. 1.4ರಷ್ಟು ಪಾಲನ್ನು ಖರೀದಿಸಿದೆ. ಮುಬಾದಲಾ-ರಿಲಾಯನ್ಸ್ ರೀಟೇಲ್ ಒಪ್ಪಂದದ ಬಗ್ಗೆ ಆರ್​ಐಎಲ್ ಇಂದು ಅಧಿಕೃತ ಪ್ರಕಟಣೆ ಹೊರಡಿಸಿತು.

ಮುಬಾದಲ ಸಂಸ್ಥೆ ಈ ಮುಂಚೆಯೂ ಜಿಯೋದಲ್ಲಿ ಹೂಡಿಕೆ ಮಾಡಿತ್ತು. ಜೂನ್ ತಿಂಗಳಲ್ಲಿ ಜಿಯೋದ ಡಿಜಿಟಲ್ ವಿಭಾಗದ ಪ್ಲಾಟ್​ಫಾರ್ಮ್​ಗಳಲ್ಲಿ ಮುಬಾದಲ 9,093 ಕೋಟಿ ರೂ ಬಂಡವಾಳ ಹಾಕಿತ್ತು. ಈಗ ವಿಶ್ವದ ಅನೇಕ ಪ್ರಮುಖ ಹೂಡಿಕೆದಾರರ ಚಿತ್ತ ಈಗ ಜಿಯೋದ ರೀಟೇಲ್ ಪ್ಲಾಟ್​ಫಾರ್ಮ್​ಗಳತ್ತ ಹರಿಯುತ್ತಿದೆ. ಇನ್ನು, ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ ಸಂಸ್ಥೆ ಬಿಟ್ಟರೆ ಅಬುಧಾಬಿ ಸರ್ಕಾರದ ಅತಿದೊಡ್ಡ ಹೂಡಿಕೆದಾರ ಸಂಸ್ಥೆ ಎಂದರೆ ಮುಬದಾಲವೇ. ಇದು 50ಕ್ಕೂ ಹೆಚ್ಚು ದೇಶಗಳಲ್ಲಿ ಉದ್ಯಮಗಳು ಹಾಗೂ ಹೂಡಿಕೆಗಳನ್ನ ಹೊಂದಿದೆ. ಕೃಷಿ, ಐಟಿ, ಸಂವಹನ ತಂತ್ರಜ್ಞಾನ, ಸೆಮಿಕಂಡಕ್ಟರ್, ಗಣಿಗಾರಿಕೆ, ಔಷಧೋದ್ಯಮ, ವೈದ್ಯಕೀಯ ತಂತ್ರಜ್ಞಾನ, ಮರುಬಳಕೆ ಇಂಧನ ಇತ್ಯಾದಿ ವಿವಿಧ ಪ್ರಾಕಾರಗಳ ಕ್ಷೇತ್ರಗಳಲ್ಲಿ ಮುಬದಾಲ ನೆಲೆ ಹೊಂದಿದೆ.

ಸೆಪ್ಟೆಂಬರ್ 30ರಂದು ಸಿಲ್ವರ್ ಲೇಕ್ ಸಂಸ್ಥೆಯ ಸಹಹೂಡಿಕೆದಾರರು ರಿಲಾಯನ್ಸ್ ರೀಟೇಲ್​ನಲ್ಲಿ 1,875 ಹೂಡಿಕೆ ಮಾಡುತ್ತಿರುವುದಾಗಿ ಆರ್​ಐಎಲ್ ತಿಳಿಸಿತ್ತು. ಇದರೊಂದಿಗೆ ಸಿಲ್ವರ್ ಲೇಕ್ ಸಂಸ್ಥೆ ರಿಲಾಯನ್ಸ್​ನ ವಿವಿಧ ಪ್ಲಾಟ್​ಫಾರ್ಮ್​​ಗಳಲ್ಲಿ ಹೂಡಿಕೆ ಮಾಡಿದ ಮೊತ್ತ 9,375 ಕೋಟಿ ರೂ ಆಗಿದೆ. ಅದಕ್ಕೂ ಸ್ವಲ್ಪ ಮೊದಲು ಕೆಕೆಆರ್ ಹಾಗೂ ಜನರಲ್ ಅಟ್ಲಾಂಟಿಕ್ ಸಂಸ್ಥೆಗಳೂ ಕೂಡ ರಿಲಾಯನ್ಸ್​ನಲ್ಲಿ 5,550 ಕೋಟಿ ರೂ ಹ ಆಗೂ 3,675 ಕೋಟಿ ರೂ ಹೂಡಿಕೆ ಮಾಡಿವೆ.

ವಿಶ್ವದ ಅನೇಕ ಪ್ರಮುಖ ಹೂಡಿಕೆ ಸಂಸ್ಥೆಗಳಿಂದ ಬಂಡವಾಳ ಆಕರ್ಷಿಸುತ್ತಿರುವ ರಿಲಾಯನ್ಸ್ ರೀಟೇಲ್​ನ ವ್ಯವಹಾರ ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ದೇಶಾದ್ಯಂತ 12 ಸಾವಿರ ಮಳಿಗೆಗಳೊಂದಿಗೆ ರಿಲಾಯನ್ಸ್ ರೀಟೇಲ್ ವ್ಯವಹಾರ ಹೊಂದಿದೆ.

Comments are closed.