ಕ್ರೀಡೆ

ರಾಮಮಂದಿರಕ್ಕೆ ಶುಭಕೋರಿದ ಕ್ರಿಕೆಟಿಗನ ಪತ್ನಿಗೆ ಕೊಲೆ, ಅತ್ಯಾಚಾರದ ಬೆದರಿಕೆ!

Pinterest LinkedIn Tumblr


ಕೋಲ್ಕತಾ: ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಶುಭ ಕೋರಿದ್ದಕ್ಕೆ ತನಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಪತ್ನಿ ಆರೋಪಿಸಿದ್ದಾರೆ.

ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸವನ್ನು ಸ್ವಾಗತಿಸಿ ಮೊಹಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಕೊಲೆ, ಅತ್ಯಾಚಾರದ ಬೆದರಿಕೆಗಳು ಬಂದಿದ್ದವು. ಇದರಿಂದಾಗಿ ತನಗೆ ಮತ್ತು ಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅವರು ಪೊಲೀಸರ ಮೊರೆ ಹೋಗಿದ್ದರು.

ಆದರೆ ತಮ್ಮ ಮನವಿಯನ್ನು ಪೊಲೀಸರು ನಿರ್ಲಕ್ಷ್ಯ ಮಾಡಿರುವುದಾಗಿ ದೂರಿ ಅವರು ಕೋಲ್ಕತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಸೀನ್​​​ ಜಹಾನ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್​ ಇಲಾಖೆಗೆ ಹೈಕೋರ್ಟ್​ ಆದೇಶಿಸಿದೆ.

ಸಾಮಾಜಿಕ ಜಾಲತಾಣದ ಮೂಲಕ ನನ್ನನ್ನು ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ನನಗೆ ಅಸುರಕ್ಷಿತ ಭಾವನೆ ಮೂಡುತ್ತಿದ್ದು, ದಯವಿಟ್ಟು ಸಹಾಯ ಮಾಡಿ. ಇದೇ ರೀತಿ ಮುಂದುವರೆದರೆ ನಾನು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆಯಿದೆ. ಆದರೆ ಪೊಲೀಸರು ತಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಹಸೀನ್​ ಅರ್ಜಿಯಲ್ಲಿ ಹೇಳಿದ್ದರು.

ಅರ್ಜಿದಾರರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ಅವರ ದೂರಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

Comments are closed.