ಕರ್ನಾಟಕ

ನಾಳೆ ಕರ್ನಾಟಕ ಬಂದ್; ಏನಿರುತ್ತೆ…ಏನಿರಲ್ಲ..?

Pinterest LinkedIn Tumblr

ಬೆಂಗಳೂರು: ರಾಜ್ಯ ಸರ್ಕಾರ ಜಾರಿ ತರಲು ಇಚ್ಛಿಸಿರುವ ಕೃಷಿ ವಿರೋಧಿ ನೀತಿ ಹಾಗೂ ಕಾಯ್ದೆಗಳ ವಿರುದ್ಧ ರೊಚ್ಚಿಗೆದ್ದಿರುವ ರೈತಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 28ರಂದು) ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ಘೋಷಿಸಿದ್ದು, ನಾಳೆ ರಾಜ್ಯದಲ್ಲಿ ಜನಜೀವನ ಅಸ್ತವಸ್ಥವಾಗುವ ಸಾಧ್ಯತೆ ಇದೆ.

ನಾಳೆ ರೈತರು ಹಾಗೂ ಕೆಲ ಸಂಘಟನೆಗಳು ಪ್ರತಿಭಟನೆ ಮಾಡುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆ ಮಾಡುವ ಸಾಧ್ಯತೆ ಇದೆ. ಟೌನ್ ಹಾಲ್, ರೈಲ್ವೆ ಸ್ಟೇಷನ್, ಮೆಜೆಸ್ಟಿಕ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್‌ ಬಳಿ ಪ್ರಮುಖವಾಗಿ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಈ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲು ನಿರ್ಧರಿಸಲಾಗಿದೆ. ಪ್ರತಿಭಟನೆ ತೀವ್ರತೆ ನೋಡಿಕೊಂಡು ಭದ್ರತೆ ಹೆಚ್ಚಿಸಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲೂ ಪ್ರತಿಭಟನೆ ನಡೆಯಲಿದೆ.

ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ರಸ್ತೆ ಕೆಲಕಾಲ ಬಂದ್ ಆಗುವ ಸಾಧ್ಯತೆ ಇದೆ. ಕರವೇ ಕಾರ್ಯಕರ್ತರಿಂದ ರ್ಯಾಲಿ ನಡೆಯಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಯೋಜಿಸಲಾಗಿದೆ.

ಎಂದಿನಂತೆ ಸರ್ಕಾರಿ ಸ್ವಾಮ್ಯದ ವಾಹನಗಳು ಓಡಾಡಲಿವೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಓಡಾಟದಲ್ಲಿ ಯಾವುದೇ ವ್ಯತ್ಯಾಯ ಇರುವುದಿಲ್ಲ. ಈಗಾಗಲೇ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಅಂಗಡಿ ಮುಂಗಟ್ಟುಗಳು, ಮಾಲ್​ಗಳು ಮುಚ್ಚಿರಲಿವೆ. ಆಟೋ, ಓಲಾ, ಊಬರ್ ಮುಂತಾದ ಖಾಸಗಿ ಸಾರಿಗೆ ವ್ಯವಸ್ಥೆ ಬಂದ್​ಗೆ ಬೆಂಬಲ ಸೂಚಿಸಿದ್ದು, ಇವು ಸಂಪೂರ್ಣ ಸ್ತಬ್ಧವಾಗಲಿದೆ. ಹೋಟೆಲ್​ಗಳು ನೈತಿಕ ಬೆಂಬಕ ಮಾತ್ರ ಇರುವುದರಿಂದ ಅವು ತೆರೆದಿರಲಿವೆ.

ಉಳಿದಂತೆ ಮೆಡಿಕಲ್ ಶಾಪ್, ಆಸ್ಪತ್ರೆ, ಪೆಟ್ರೊಲ್ ಬಂಕ್, ತರಕಾರಿ-ಹಣ್ಣು ಮುಂತಾದ ಅಗತ್ಯ ಸೇವೆಗಳು ಎಂದಿನಂತೆ ಮುಂದುವರೆಯಲಿವೆ.

ಏನಿರುತ್ತೆ?
ಕರ್ನಾಟಕ ಬಂದ್ ವೇಳೆ ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಇರಲಿವೆ. ಹೋಟೆಲ್ ಗಳು ಎಂದಿನಂತೆ ಓಪನ್ ಇರಲಿದ್ದು, ಕೆಎಸ್‌ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಸಂಚಾರ ಇರಲಿದೆ.

ಏನಿರಲ್ಲ?
ಓಲಾ-ಉಬರ್, ಆಟೋ-ಟ್ಯಾಕ್ಸಿ ಸಂಘಗಳು ಬಂದ್ ಗೆ ಬೆಂಬಲ ನೀಡಿದ್ದು, ಈ ಸೇವೆಗಳು ಇರುವುದಿಲ್ಲ. ಖಾಸಗಿ ಬಸ್, ಲಾರಿ ಸೇವೆಗಳು ಬಂದ್ ಇರಲಿವೆ ಎನ್ನಲಾಗಿದೆ. ಅಂಗಡಿ ಮುಂಗಟ್ಟು ಕ್ಲೋಸ್, ಮಾಲ್ ಗಳು ಓಪನ್ ಆಗಲ್ಲ, ಪ್ರತಿಭಟನೆಯ ತೀವ್ರತೆ ನೋಡಿಕೊಂಡು ಕೈಗಾರಿಕೆಗಳು, ಕಂಪನಿಗಳು ಮುಚ್ಚುವ ಬಗ್ಗೆ ನಿರ್ಧಾರ ಮಾಡಲು ನಿರ್ಧರಿಸಲಾಗಿದೆ.

Comments are closed.