
ಬೆಂಗಳೂರು: ಕಳೆದೊಂದು ವಾರಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ 8 ಸಾವಿರಕ್ಕಿಂತಲೂ ಹೆಚ್ಚೇ ಇರುತ್ತಿದ್ದ ಹೊಸ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಇದೇ ಮೊದಲ ಬಾರಿಗೆ ಭಾರಿ ಇಳಿಕೆಯಾಗಿದೆ. ಜತೆಗೆ, ಆಸ್ಪತ್ರೆಯಿಮದ ಡಿಸ್ಚಾರ್ಜ್ ಆದವರ ಪ್ರಮಾಣದಲ್ಲೂ ಭಾರಿ ಏರಿಕೆಯಾಗಿದೆ.
ಭಾನುವಾರ ಕೋವಿಡ್ ಸಂಖ್ಯೆ 6,495ಕ್ಕೆ ಇಳಿದಿದೆ. ಹಿಂದಿನ ದಿನ ಈ ಸಂಖ್ಯೆ 8,852 ಆಗಿತ್ತು. ಕೋವಿಡ್ ಚೇತರಿಕೆ ಕಂಡವರ ಪ್ರಮಾಣವೂ ಹೆಚ್ಚಳವಾಗಿದ್ದು, 7,238 ಜನರು ಗುಣವಾಗಿದ್ದಾರೆ. ಈವರೆಗೆ ಒಟ್ಟು 2,49,467 ಜನರು ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,42,423 ಕ್ಕೆ ಏರಿಕೆಯಾಗಿದ್ದು, ಒಟ್ಟು ಸಕ್ರಿಯ ಕೇಸ್ಗಳು 87,235 ಆಗಿವೆ. ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 113 ಜನರು ಸಾವಿಗೀಡಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5,702ಕ್ಕೆ ತಲುಪಿದೆ. ಸದ್ಯ 747 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿಯೂ ಹೊಸ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಭಾನುವಾರ 1,862 ಜನರು ಸೋಂಕಿಗೆ ಒಳಗಾಗಿದ್ದು, ಹಿಂದಿನ ದಿನ ಈ ಸಂಖ್ಯೆ 2,821 ಆಗಿತ್ತು. ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 1,27,336 ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 2,422 ಆಗಿದೆ. ಈವರೆಗೆ ಒಟ್ಟು 90,043 ಜನರು ಗುಣವಾಗಿದ್ದಾರೆ. ಇನ್ನು 27 ಜನರು ಸಾವಿಗೀಡಾಗುವ ಮೂಲಕ 1,965 ಜನರು ಕರೊನಾದಿಂದ ಮೃತಪಟ್ಟಂತಾಗಿದೆ.
Comments are closed.