ಬೆಂಗಳೂರು (ಆ.8): ಇತ್ತೀಚೆಗೆ ಕೊರೋನಾ ಜೊತೆ ಜೊತೆಗೆ ಚರ್ಚೆಯಲ್ಲಿರುವ ಮತ್ತೊಂದು ವಿಚಾರ ಎಂದರೆ ಅದು ಚಿನ್ನದ ದರ. ಯಾವಾಗ ಕೊರೋನಾ ವೈರಸ್ ದೇಶಕ್ಕೆ ಲಗ್ಗೆ ಇಟ್ಟಿತ್ತೋ ಅಂದಿನಿಂದ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಲೇ ಇದೆ. ಶುದ್ಧ ಚಿನ್ನ 57 ಸಾವಿರದ ಗಡಿ ದಾಟಿದರೆ, ಬೆಳ್ಳಿ ದರ 80 ಸಾವಿರದ ಗಡಿ ಸಮೀಪಿಸಿದೆ. ಗುರುವಾರ ಆಭರಣ ಚಿನ್ನ 10 ಗ್ರಾಂಗೆ 420 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 52,800 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 520 ರೂಪಾಯಿ ಏರಿಕೆ ಕಂಡಿದ್ದು, 57,600 ರೂಪಾಯಿ ಆಗಿದೆ.
ಬೆಳ್ಳಿ ಖರೀದಿದಾರರಿಗೂ ಸಿಹಿ ಸುದ್ದಿ ಸಿಗುತ್ತಿಲ್ಲ. ಬೆಳ್ಳಿ ಬೆಲೆಯಲ್ಲಾದರೂ ಇಳಿಕೆ ಕಾಣಬಹುದು ಎಂದು ಕಾದು ಕೂತಿದ್ದವರಿಗೂ ನಿರಾಸೆ ಆಗಿದೆ. ನಿನ್ನೆ ಒಂದೇ ದಿನ ಕೆಜಿ ಬೆಳ್ಳಿಗೆ 3010 ರೂಪಾಯಿ ಏರಿಕೆ ಕಾಣುವ ಮೂಲಕ ಬೆಳ್ಳಿ ದರ 76,510 ರೂಪಾಯಿ ಏರಿಕೆ ಕಂಡಿದೆ.
ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.
ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
Comments are closed.