ರಾಷ್ಟ್ರೀಯ

ಕೊರೋನಾದಿಂದ ಸಾವಿನ ಪ್ರಮಾಣ ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರದ ಸೂಚನೆ

Pinterest LinkedIn Tumblr


ನವದೆಹಲಿ: ಕರೊನಾವೈರಸ್​​ನಿಂದಾಗಿ ಸಂಭವಿಸುತ್ತಿರುವ ಸಾವಿನ ಪ್ರಕರಣಗಳನ್ನು ತಗ್ಗಿಸಲು ಮುಂದಾಗಬೇಕೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ಹೆಚ್ಚು ಸಾವಿನ ಪ್ರಕರಣಗಳು ವರದಿಯಾದ ಎಂಟು ರಾಜ್ಯಗಳಿಗೆ ಕೇಂದ್ರ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಸಲಹೆ, ಸೂಚನೆಗಳನ್ನು ನೀಡಿದ್ದು, ವೈದ್ಯಕೀಯ ನಿರ್ವಹಣೆಯನ್ನು ಸುಧಾರಿಸಲು ಸಂಪನ್ಮೂಲಗಳ ಬಳಕೆಯನ್ನು ಅತ್ಯುತ್ತಮಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದೆ.

ಆರೋಗ್ಯ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ರಾಷ್ಟ್ರೀಯ ಮರಣ ಪ್ರಮಾಣ (ಸಿಎಫ್‌ಆರ್) 2.04% ರಷ್ಟಿದ್ದರೂ ಕೋವಿಡ್​​ 19ನಿಂದಾಗಿ ಒಟ್ಟು ಮರಣ ಪ್ರಮಾಣದ ಶೇ.14 ಮತ್ತು ಒಟ್ಟು ಶೇ.9 ಸಕ್ರಿಯ ಪ್ರಕರಣಗಳಿಗೆ ಎಂಟು ರಾಜ್ಯಗಳ 13 ಜಿಲ್ಲೆಗಳು ಹೊಣೆಯಾಗಿವೆ. ಅವುಗಳೆಂದರೆ ಅಸ್ಸಾಂನ ಕಾಮ್​ರೂಪ್ ಮೆಟ್ರೋ, ಬಿಹಾರದ ಪಾಟ್ನಾ, ಜಾರ್ಖಂಡ್‌ನ ರಾಂಚಿ, ಕೇರಳದ ಆಲಪ್ಪುಳ ಮತ್ತು ತಿರುವನಂತಪುರಂ, ಒಡಿಶಾದ ಗಂಜಾಂ, ಉತ್ತರ ಪ್ರದೇಶದ ಲಖನೌ, ಪಶ್ಚಿಮ ಬಂಗಾಳದ ಹೂಗ್ಲಿ, ಹೌರಾ, ಕೋಲ್ಕತ ಮತ್ತು ದೆಹಲಿ.

ಮೇಲೆ ತಿಳಿಸಿದ ಜಿಲ್ಲೆಗಳು ಪ್ರತಿ ದಶಲಕ್ಷಕ್ಕೆ ಕಡಿಮೆ ಪರೀಕ್ಷೆಗಳು ಮತ್ತು ಹೆಚ್ಚಿನ ದೃಢೀಕರಣ ಪ್ರಮಾಣವನ್ನು ಹೊಂದಿದ್ದರೆ ಕಾಮರೂಪ್ ಮೆಟ್ರೋ, ಲಕ್ನೋ, ತಿರುವನಂತಪುರಂ ಮತ್ತು ಆಲಪ್ಪುಳ ನಾಲ್ಕು ಪ್ರದೇಶಗಳಲ್ಲಿ ಪ್ರತಿನಿತ್ಯ ಹೊಸ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ, ಅಂದಾಜು ಬೆಳವಣಿಗೆ ದರವನ್ನು ಆಧರಿಸಿ ಐಸಿಯು, ಹಾಸಿಗೆ ಮತ್ತು ಆಮ್ಲಜನಕ ಪೂರೈಕೆಯ ಮೂಲಸೌಕರ್ಯಗಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಸಮಯೋಚಿತ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಬೇಕೆಂದು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರೋಗ್ಯ ಸಚಿವಾಲಯದ ಇಂದಿನ ವರದಿ ಪ್ರಕಾರ ಭಾರತದಲ್ಲಿ ಒಟ್ಟು 20,88,612 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 6,19,088 ಸಕ್ರಿಯ ಪ್ರಕರಣಗಳಿವೆ. 14,27,006 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 42,518 ಕ್ಕೇರಿದೆ.

Comments are closed.