ಕರ್ನಾಟಕ

ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನಿಷೇಧಿಸಿ: ಶ್ರೀರಾಮಸೇನೆ ಸಂಸ್ಥಾಪಕ‌ ಪ್ರಮೋದ್ ಮುತಾಲಿಕ್

Pinterest LinkedIn Tumblr


ವಿಜಯಪುರ(ಆ. 08): ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಷೇಧಿಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ‌ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು‌ ಒತ್ತಾಯಿಸಿದ್ದಾರೆ.

ಆ. 5ರಂದು ಪ್ರಧಾನಿ ನರೇಂದ್ರ ಮೋದಿ‌ ಅಯೋಧ್ಯೆಯಲ್ಲಿ ರಾಮ ಮಂದಿರರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಆದರೆ, ರಾಮ ಮಂದಿರ ನಿರ್ಮಾಣವನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಿರೋಧಿಸಿದೆ. ‌ ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪುವುದಿಲ್ಲ. ರಾಮ ಮಂದಿರ ಕೆಡವಿ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ಟರ್ಕಿಯ ಹಾಜಿ ಸೋಫಿಯಾ ಚರ್ಚ್ ಅನ್ನು ಮಸೀದಿಯನ್ನಾಗಿ ಮಾಡಿರುವ ಉದಾಹರಣೆ ನೀಡಿದ್ದಾರೆ. ‌ಇದು ನ್ಯಾಯಾಂಗ ನಿಂದನೆಯಾಗುತ್ತೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.

ಸುಪ್ರೀಂ ಕೋರ್ಟ್ ಒಮ್ಮತದಿಂದ ರಾಮ ಮಂದಿರ ನಿರ್ಮಾಣದ ಕುರಿತು ತೀರ್ಪು ನೀಡಿದೆ. ಈ ತೀರ್ಪು ಪ್ರಕಟವಾಗುವ‌ ಮುಂಚೆ ತೀರ್ಪನ್ನು ಒಪ್ಪುತ್ತೇವೆ ಎಂದು ಹಿಂದೂ ಮತ್ತು‌ ಮುಸ್ಲಿಂ ಮುಖಂಡರು ತಿಳಿಸಿದ್ದರು. ಈಗ ಈ ತೀರ್ಪನ್ನು ವಿರೋಧಿಸಿ ನೀಡಿರುವ ಹೇಳಿಕೆಗಳು ಹಿಂದೂಗಳನ್ನು ಕೆರಳಿಸುತ್ತಿವೆ ಎಂದು ಅವರು ತಿಳಿಸಿದರು.

ಈವರೆಗೆ ಈ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಎಸ್​ಡಿಪಿಐ ವಿರುದ್ಧ ಯಾಕೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದೀರಿ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಇವರ ವಿಷಯದಲ್ಲಿ‌ ಸರಕಾರ ಯಾಕೆ ಮೌನ ವಹಿಸಿದೆ? ಸುಪ್ರೀಂ ಕೋರ್ಟ್ ತೀರ್ಪು ನೀಡಿ 10 ತಿಂಗಳ ನಂತರ ಇವರು ಯಾಕೆ ಅಪಸ್ವರ ಎತ್ತುತ್ತಿದ್ದಾರೆ? ಇದು ಸಮಾಜ ದ್ರೋಹಿ, ದೇಶ ದ್ರೋಹಿ ಕೆಲಸ ಎಂದು ಪ್ರಮೋದ ಮುತಾಲಿಕ ಆಕ್ರೋಶ ಹೊರಹಾಕಿದರು.

ಅಲೋಪಥಿ ಚಿಕತ್ಸೆ ಪರ ಲಾಬಿಗೆ ಸರಕಾರ ಮಣಿದಿದೆ:

ಇದೇ ವೇಳೆ, ಕೊರೋನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸುಲಿಗೆ ಮಾಡುತ್ತಿವೆ. ಕೆಲವರು ಎಡ್ಮಿಷನ್ ತೆಗೆದುಕೊಳ್ಳುತ್ತಿಲ್ಲ. ರೂ.3 ಲಕ್ಷ ಸುಲಿಗೆ ಮಾಡುತ್ತಿವೆ. ಆದರೆ, ಡಾ. ಗಿರಿದರ ಕಜೆ ಕೊರೋನಾ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದಾರೆ. 9 ದಿನಗಳಲ್ಲಿ ಕೊರೊನಾ ರೋಗಿಗಗಳನ್ನು ಗುಣಪಡಿಸಿದ್ದಾರೆ. ಅಲ್ಲದೇ, ಕೇವಲ‌ ರೂ.300 ವೆಚ್ಚದಲ್ಲಿ ಚಿಕಿತ್ಸೆ ನೀಡಿದ್ದಾರೆ. ಈಗಾಗಲೇ 70 ಲಕ್ಷ ಮಾತ್ರೆಗಳನ್ನು ಸರಕಾರಕ್ಕೆ ನೀಡಿದ್ದಾರೆ. ಆದರೆ, ಅವರಿಗೆ ಸರಕಾರ ಹಣ ನೀಡಿಲ್ಲ. ಡಾ. ಗಿರಿಧರ ಕಜೆ ಹೊಸ ಔಷಧಿಯನ್ನೇನೂ ಕಂಡು ಹಿಡಿದಿಲ್ಲ. 20 ವರ್ಷಗಳಿಂದ ಅವರು ತಾವು ನೀಡುತ್ತಿರುವ ಔಷಧಿಯನ್ನೇ ನೀಡಿ ಕೊರೊನಾ ರೋಗಿಗಳನ್ನು ಗುಣಪಡಿಸಿದ್ದಾರೆ. ಆದರೆ, ಸರಕಾರ ಇವರಿಗೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ‌ತಮ್ಮ ಔಷಧಿಯ ಫಾರ್ಮುಲಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದರೂ ಸರಕಾರ ಇವರಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಮುತಾಲಿಕ್ ಬೇಸರ ವ್ಯಕ್ತಪಡಿಸಿದರು.ಸರಕಾರ ಅಲೋಪಥಿಕ್ ಮಾಫಿಯಾ ಮತ್ತು ಲಾಬಿಗೆ ಮಣಿದಿದೆ. ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿಪಕ್ಷಗಳು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುವ ಬದಲು ಕೇವಲ ಹೇಳಿಕೆಗಳನ್ನು ನೀಡಿ ಮೌನವಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುವುದು ಪಾಪದ ಕೆಲಸ ಎಂದೂ ಶ್ರೀರಾಮ ಸೇನೆ ಸಂಸ್ಥಾಪಕರೂ ಆದ ಅವರು ಆರೋಪಿಸಿದರು.

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿ:

ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಸರಕಾರ ಈವರೆಗೆ ಅವಕಾಶ‌ ನೀಡಿಲ್ಲ. ಆದರೆ, ಕೊವಿಡ್ ನಿಯಮಗಳ ಪ್ರಕಾರವೇ ಆಚರಣೆಗೆ ಅವಕಾಶ ನೀಡಬೇಕು. ಮಾಲ್ ಮತ್ತು ಬಾರ್ ಹಾಗೂ ಹೋಟೇಲುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದರೆ ನಾವು ತೀರ್ಥ ಕೊಡುವುದಿಲ್ಲ. ಪ್ರಸಾದ ವಿತರಿಸುವುದಿಲ್ಲ. ಭಜನೆಯನ್ನೂ‌ ಮಾಡುವುದಿಲ್ಲ. ನಿಯಮದ ಪ್ರಕಾರವೇ ಸಾರ್ವಜನಿಕವಾಗಿ ಗಣೇಶ ಉತ್ಸವ ಆಚರಣೆ ಮಾಡುತ್ತೇವೆ. ಮಹಾರಾಷ್ಟ್ರ ಮಾದರಿಯಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಆಚರಣೆ ನಿಲ್ಲಿಸುವುದಿಲ್ಲ. ಬೇಕಿದ್ದರೆ ಬಂಧಿಸಿ ಎಂದು ಅವರು ಸವಾಲು ಹಾಕಿದರು.

ಸಾರ್ವಜನಿಕ‌ ಗಣೇಶ ಉತ್ಸವ ಆಚರಣೆ ಕುರಿತು‌ ಸರಕಾರ ಈ ಕೂಡಲೇ ಹೇಳಿಕೆ ಬಿಡುಗಡೆ ಮಾಡಬೇಕು. ಸಾರ್ವಜನಿಕ ದೇವಸ್ಥಾನಗಳನ್ನು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಸಾರ್ವಜನಿಕ ಗಣೇಶ ಉತ್ಸವಕ್ಕೆ ಯಾಕೆ ವಿರೋಧ ಮಾಡುತ್ತಿದ್ದೀರಿ? ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಗಣೇಶ ಮೂರ್ತಿಗಳನ್ನು ನಿಷೇಧಿಸಿ ಎಂದು ಪ್ರಮೋದ ಮುತಾಲಿಕ ಈ ಸಂದರ್ಭದಲ್ಲಿ ಆಗ್ರಹಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಮುಖಂಡ ನೀಲಕಂಠ ಕಂದಗಲ್, ಕುಲಕರ್ಣಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Comments are closed.