ಕರ್ನಾಟಕ

ನಾನು ಆರೋಗ್ಯವಾಗಿದ್ದೇನೆ; ಆಸ್ಪತ್ರೆಯಿಂದ ಯಡಿಯೂರಪ್ಪ ವಿಡಿಯೋ ಸಂದೇಶ

Pinterest LinkedIn Tumblr


ಬೆಂಗಳೂರು (ಆ. 3): ವೈದ್ಯಕೀಯ ತಪಾಸಣೆ ವೇಳೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವಿಡಿಯೋ ಸಂದೇಶ ರವಾನಿಸಿರುವ ಸಿಎಂ ಯಡಿಯೂರಪ್ಪ, ವೈದ್ಯರು ತಪಾಸಣೆ ಮಾಡಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿರುವ ಎಲ್ಲರಿಗೂ ಧನ್ಯವಾದ. ರಾಜ್ಯದ ಜನರೆಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಿಮ್ಮ ಸುರಕ್ಷತೆಯ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿದ್ದಾರೆ.

ನಿನ್ನೆ ರಾತ್ರಿ 8ರಿಂದ 9 ಗಂಟೆಗೆ ನನಗೆ ಕೊರೋನಾ ಪಾಸಿಟಿವ್ ಇದು ಎಂದು ತಿಳಿಯಿತು. ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರು ರಾತ್ರಿಯಿಂದ ಪರೀಕ್ಷೆ ಮಾಡಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೀರಿ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಾನು ಆಸ್ಪತ್ರೆ ಸೇರಿರುವ ವಿಚಾರ ತಿಳಿಯುತ್ತಿದ್ದಂತೆ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ, ದೇವೇಗೌಡರು, ಎಚ್​.ಡಿ. ಕುಮಾರಸ್ವಾಮಿ, ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಿನ್ನೆಯಿಂದ ನಾನು ಅಧಿಕಾರಿಗಳಿಂದ ಸಂಪರ್ಕದಲ್ಲಿ ಇದ್ದೇನೆ. ರಾಜ್ಯದ ಕೆಲಸಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂದು ಸೂಚನೆ ನೀಡಿದ್ದೇನೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ನಾನು ಗುಣಮುಖನಾಗಿ ಕರ್ತವ್ಯದಲ್ಲಿ ತೊಡಗುತ್ತೇನೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ಆರೋಗ್ಯದ ಜೊತೆಗೆ ಈ ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯವೂ ಮುಖ್ಯ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು. ಕೋರೋನಾ ರೋಗದಿಂದ ದೂರವಿರಿ ಎಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ವಾರದ ಆರೋಗ್ಯ ಚೆಕಪ್ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಯಾವುದೇ ರೋಗಲಕ್ಷಣಗಳಿಲ್ಲದ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಡಿಯೂರಪ್ಪನವರ ಮಗಳು ಪದ್ಮಾ, ಅವರ ಗೃಹಕಚೇರಿಯ ಅಡುಗೆ ಭಟ್ಟ, ಕಾರು ಚಾಲಕ ಸೇರಿದಂತೆ 6 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.

Comments are closed.