ಕರ್ನಾಟಕ

2 ಮಾತ್ರೆ, 7 ದಿನ ನಿಗಾ.. ಕೊರೊನಾ ಮಾಯ..!: ಪ್ರಗತಿಪರ ಕೃಷಿಕ ನಭಿಖಾನ್‌

Pinterest LinkedIn Tumblr


ಚಾಮರಾಜನಗರ: ‘ನನಗೆ ಕೊರೊನಾ ಪಾಸಿಟಿವ್‌ ಇದೆ ಎಂದು ಫೋನ್‌ ಬಂದಾಗ ಸ್ವಲ್ಪ ಮಂಕಾದೆ. ಆದ್ರೆ ನಂತರದ ಎಂಟು ದಿನ ನನ್ನಲ್ಲಿ ಯಾವುದೇ ಸಮಸ್ಯೆಯೂ ಕಾಣಿಸಿಕೊಳ್ಳದೆ ಎಂದಿನಂತೆ ಇದ್ದೆ. ಕೋವಿಡ್‌ ಕೇರ್‌ನಲ್ಲಿ ಅತ್ಯುತ್ತಮ ವ್ಯವಸ್ಥೆಯೊಂದಿಗೆ ನಮ್ಮನ್ನು ಚೆನ್ನಾಗಿ ನೋಡಿಕೊಂಡ್ರು. ಇದೀಗ ನಾನು ನೆಗೆಟಿವ್‌.’

ಹೀಗೆಂದು ಸಾಕಷ್ಟು ಆತ್ಮವಿಶ್ವಾಸದಿಂದ ಹೇಳಿದವರು, ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ನಭಿಖಾನ್‌. ಇದೀಗ ಅವರು ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈ ವೇಳೆ ತಮ್ಮ ಅನುಭವ ಹಂಚಿಕೊಂಡ ಅವರು, ‘ನನಗೆ ಕೊರೊನಾ ಪಾಸಿಟಿವ್‌ ಇದೆ ಎಂಬ ವರದಿ ಬಂದ ಹೊರತು ಇನ್ನಾವುದೇ ಬದಲಾವಣೆ, ಆರೋಗ್ಯ ಸಮಸ್ಯೆ ಏನೂ ಆಗಲಿಲ್ಲ. ಕೋವಿಡ್‌ ಕೇರ್‌ನಲ್ಲಿದ್ದ ಏಳು ದಿನವೂ ಆರಾಮವಾಗಿದ್ದೆ. ಅಷ್ಟರಲ್ಲಿ ನೆಗೆಟಿವ್‌ ವರದಿ ಬಂತು. ಇದೀಗ ಮನೆಯಲ್ಲಿ ಆರಾಮವಾಗಿ, ಆರೋಗ್ಯವಾಗಿದ್ದೇನೆ” ಎಂದರು.

”ನಮ್ಮೂರು ನಾಗವಳ್ಳಿಯಲ್ಲಿ ಇಬ್ಬರಿಗೆ ಹಾಗೂ ಜ್ಯೋತಿ ಗೌಡನಪುರದಲ್ಲಿ ಒಬ್ಬರಿಗೆ ಪಾಸಿಟಿವ್‌ ಬಂದಿತ್ತು. ಸಾಮಾನ್ಯವಾಗಿ ಇದೇ ಭಾಗದಲ್ಲಿ ನನ್ನದು ಹೆಚ್ಚು ಓಡಾಟವಾದ್ದರಿಂದ ಏತಕ್ಕೂ ಇರಲಿ ಎಂದು ಒಂದಿಬ್ಬರು ವೈದ್ಯರ ಸಲಹೆ ಪಡೆದು ಗಂಟಲ ದ್ರವ ಪರೀಕ್ಷೆ ಮಾಡಿಸಿದೆ. ಒಂದೆರಡು ದಿನ ಬಿಟ್ಟು ನಾನು ಜಮೀನಿನಲ್ಲಿದ್ದ ವೇಳೆ ಡಿಎಚ್‌ಒ ಆಫೀಸ್‌ನಿಂದ ಫೋನ್‌ ಬಂತು. ನಿಮ್ಮ ಸ್ವ್ಯಾಬ್‌ ವರದಿ ಪಾಸಿಟಿವ್‌ ಬಂದಿದೆ. ನೀವು ಎಲ್ಲಿದ್ದೀರಿ ಎಂದು ತಿಳಿಸಿದರೆ ಆಂಬ್ಯುಲೆನ್ಸ್‌ನಲ್ಲಿ ಬಂದು ಕರೆದೊಯ್ಯುತ್ತೇವೆ” ಎಂದರು.

ಆ ಒಂದು ಕ್ಷಣ ನನಗೆ ಸ್ವಲ್ಪ ಗಾಬರಿಯಾಯ್ತು. ಆದರೂ ವಿಚಲಿತನಾಗಲಿಲ್ಲ. ಕರೆ ಮಾಡಿದವರಿಗೆ ತಕ್ಷಣ ನೀವು ಇಲ್ಲಿಗೆ ಆಂಬ್ಯುಲೆನ್ಸ್‌ ತರುವುದು ಬೇಡ. ಹಳ್ಳಿಯ ಜನ ಗಾಬರಿಪಡುತ್ತಾರೆ. ಆದ್ದರಿಂದ ನಾನೇ ಈಗ ಆಸ್ಪತ್ರೆಗೆ ಬಂದು ದಾಖಲಾಗುತ್ತೇನೆ ಎಂದೆ. ಅಲ್ಲದೆ ಅರ್ಧ ತಾಸಿನಲ್ಲಿ ಆಸ್ಪತ್ರೆಗೆ ಬಂದು ವಿಚಾರ ತಿಳಿಸಿದೆ. ಆ ರಾತ್ರಿ ಅಲ್ಲಿ ಮತ್ತೊಮ್ಮೆ ಸ್ವ್ಯಾಬ್‌ ಸಂಗ್ರಹಿಸಿ, ಒಂದೆರಡು ಮಾತ್ರೆ ಕೊಟ್ಟರು. ಊಟ ಮಾಡಿ ಮಲಗಿದೆ.

ಮತ್ತೆ ಬೆಳಗ್ಗೆಗೆ ವೈದ್ಯರು ಬಂದು ಅರ್ಧ ತಾಸು ನನ್ನನ್ನು ಕೂರಿಸಿಕೊಂಡು ಸಾಕಷ್ಟು ಪ್ರಶ್ನೆ ಕೇಳಿದರು. ಧೈರ್ಯ ತುಂಬಿದರು. ಅಲ್ಲದೇ ನಿಮ್ಮಲ್ಲಿ ಯಾವುದೇ ರೋಗ ಲಕ್ಷಣ ಇಲ್ಲವಾದ್ದರಿಂದ ವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸುತ್ತೇವೆ ಎಂದರು. ಅಯ್ಯೋ ಅಲ್ಲೇನಾದ್ರೂ ಹೆಚ್ಚು ಕಮ್ಮಿ ಆದರೆ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ವಿವರಣೆ ನೀಡಿ, ಧೈರ್ಯದ ಮಾತುಗಳನ್ನಾಡಿದರು. ನಂತರ ಕೋವಿಡ್‌ ಕೇರ್‌ನಲ್ಲಿರಿಸಿದರು. ಅಲ್ಲಿ ನನಗೆ ಯಾವುದೇ ಔಷಧ ನೀಡಲಿಲ್ಲ. ಆದರೆ, ಪ್ರತಿ ನಿತ್ಯ ಬಂದು ಆರೋಗ್ಯ ವಿಚಾರಿಸುತ್ತಿದ್ದರು ಎಂದರು ನಭಿಖಾನ್‌

Comments are closed.