ಕರ್ನಾಟಕ

ಕಲಬುರ್ಗಿಯ ಸೇಡಂ ಶಾಸಕ, ಕುಟುಂಬ ಸದಸ್ಯರಿಗೆ ಕೊರೋನಾ

Pinterest LinkedIn Tumblr


ಕಲಬುರ್ಗಿ; ಕೊರೋನಾ ಹಾಟ್​ಸ್ಪಾಟ್ ಎನಿಸಿಕೊಂಡಿರುವ ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ರುದ್ರನರ್ತನ ಮಾಡುತ್ತಿದೆ. ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರಿಕೂ ಸೋಂಕು ದೃಢಪಟ್ಟು, ಕೊರೋನಾ ವಾರಿಯರ್ಸ್ ತಬ್ಬಿಬ್ಬಾಗುವಂತೆ ಮಾಡಿದ ಬೆನ್ನಲ್ಲೇ ಜನಪ್ರತಿನಿಧಿಗಳಿಗೂ ಸೋಂಕು ಹರಡಲು ಆರಂಭಿಸಿದೆ. ಇದೀಗ ಕಲಬುರ್ಗಿ ಜಿಲ್ಲೆ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಅವರ ಹೆಂಡತಿ ಮತ್ತು ಮಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹಾಗೂ ಅವರ ಕುಟಂಬದ ಸದಸ್ಯರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸೇಡಂ ಶಾಸಕರ ಪಿಎಗೆ ಮೂರು ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಬೆಂಗಳೂರಿಗೆ ಹೋಗುವ ಮಾರ್ಗಮಧ್ಯದಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಕಲಬುರ್ಗಿಗೆ ವಾಪಸ್ ಕಳಿಸಿಕೊಡಲಾಗಿತ್ತು. ಕಲಬುರ್ಗಿಗೆ ಬಂದು ಚೆಕ್ ಮಾಡಿಸಿಕೊಂಡಾಗ ಸೋಂಕಿರೋದು ದೃಢಪಟ್ಟಿತ್ತು. ನಂತರ ಶಾಸಕರಿಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಥ್ರೋಟ್ ಸ್ಯಾಂಪಲ್ ಟೆಸ್ಟ್ ಮಾಡಿದಾಗ ಸೋಂಕು ದೃಢಪಟ್ಟಿದೆ. ಶಾಸಕರ ಪತ್ನಿ ಹಾಗೂ ಪುತ್ರನಿಗೂ ಸೋಂಕು ದೃಢಪಟ್ಟಿದ್ದು, ಮಗಳ ವರದಿಗಾಗಿ ಕಾಯಲಾಗುತ್ತಿದೆ. ಶಾಸಕರ ಪಿಎಗೆ ಕಲಬುರ್ಗಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೊರೋನಾಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿ

ಕಲಬುರ್ಗಿಯಲ್ಲಿ ಕಿಲ್ಲರ್ ಕೊರೋನಾಗೆ ಮತ್ತೊಂದು ಬಲಿಯಾಗಿದೆ. ಕೊರೋನಾ ವೈರಸ್​ನಿಂದ ಬಳಲುತ್ತಿದ್ದ ಮುಖ್ಯ ಶಿಕ್ಷಕರೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನಿನ್ನೆ ತಡರಾತ್ರಿ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ‌31 ಕ್ಕೆ ಏರಿಕೆಯಾಗಿದೆ. ನಿನ್ನೆಯಷ್ಟೇ ಇಬ್ಬರು ಸಾವನ್ನಪ್ಪಿದ್ದರು. ದಿನೇ ದಿನೇ ಸೋಂಕಿತರು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

Comments are closed.