ಕರ್ನಾಟಕ

ಇನ್ಮುಂದೆ ಪ್ರತಿ ಭಾನುವಾರ ಲಾಕ್‍ಡೌನ್; ಕರ್ಫ್ಯೂ ಅವಧಿ ಹೆಚ್ಚಳ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹದ್ದುಮೀರಿ ವ್ಯಾಪಿಸುತ್ತಿರುವುದರಿಂದ ಸರ್ಕಾರ ಮತ್ತೊಮ್ಮೆ ಸಂಡೆ ಲಾಕ್​ಡೌನ್ ಕ್ರಮ ಜರುಗಿಸಲು ನಿರ್ಧರಿಸಿದೆ. ಜುಲೈ 5ರಿಂದಲೇ ಪ್ರತೀ ಭಾನುವಾರದಂದು ರಾಜ್ಯಾದ್ಯಂತ ಲಾಕ್​ಡೌನ್ ಮಾಡಲು ಸಿಎಂ ಕಚೇರಿ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಇವತ್ತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾನುವಾರದ ಲಾಕ್​ಡೌನ್ ಸೇರಿದಂತೆ ವಿವಿಧ ಕ್ರಮಗಳನ್ನ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯವ್ಯಾಪಿ ಲಾಕ್​ಡೌನ್ ಮಾಡಬೇಕೆಂದು ವಿಪಕ್ಷಗಳು ಒತ್ತಡ ಹಾಕುತ್ತಿದ್ದರೂ ಆರ್ಥಿಕತೆಯ ದೃಷ್ಟಿಯಿಂದ ಆ ಕ್ರಮ ಕೈಗೊಳ್ಳಲು ಸರ್ಕಾರ ನಿರಾಕರಿಸಿದೆ. ಆದರೆ, ತಜ್ಞರ ಸಲಹೆ ಪಡೆದು ಪರ್ಯಾಯ ಕ್ರಮಗಳನ್ನ ಜಾರಿಗೊಳಿಸಲು ನಿರ್ಧರಿಸಿದೆ. ಅದರಂತೆ, ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ವಾರದಲ್ಲಿ ಎರಡು ದಿನ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ. ಜುಲೈ 10ರಿಂದ ಒಂದು ತಿಂಗಳ ಕಾಲ ಈ ಕ್ರಮ ಜಾರಿಯಲ್ಲಿರುತ್ತದೆ. ಈ ಮುಂಚೆ, ತಿಂಗಳಲ್ಲಿ ಪ್ರತಿ ಭಾನುವಾರದ ಜೊತೆಗೆ 2ನೇ ಮತ್ತು 4ನೇ ಶನಿವಾರದಂದು ರಾಜ್ಯ ಸರ್ಕಾರಿ ನೌಕರರಿಗೆ ರಜೆ ಇರುತ್ತಿತ್ತು. ಈಗ ಎಲ್ಲಾ ಶನಿವಾರ ಮತ್ತು ಭಾನುವಾರದಂದು ರಜೆ ಇರಲಿದೆ.

ಇವತ್ತಿನ ಸಭೆಯಲ್ಲಿ ವಾರದಲ್ಲಿ ಎರಡು ದಿನ ಲಾಕ್​ಡೌನ್ ಮಾಡುವ ಚಿಂತನೆ ನಡೆದಿತ್ತು. ಆದರೆ, ಸದ್ಯಕ್ಕೆ ಸಂಡೇ ಲಾಕ್​ಡೌನ್ ಮಾತ್ರ ಮಾಡಿ, ಒಂದೆರಡು ವಾರಗಳ ಬಳಿಕ ಅದರ ಪರಿಣಾಮ ನೋಡಿಕೊಂಡು ವಾರಕ್ಕೆರಡು ದಿನ ಲಾಕ್​ಡೌನ್ ಮಾಡುವುದು ಒಳ್ಳೆಯದು ಎಂಬ ತಜ್ಞರ ಅಭಿಪ್ರಾಯವನ್ನ ಸ್ವೀಕರಿಸಲಾಗಿದೆ.

ಕರ್ಫ್ಯೂ ಅವಧಿ ಹೆಚ್ಚಳ:

ಈಗ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇದೆ. ಈಗ ಒಂದು ಗಂಟೆ ಮುಂಚಿತವಾಗಿ, ಅಂದರೆ ರಾತ್ರಿ 8 ಗಂಟೆಗೇ ಕರ್ಫ್ಯೂ ಶುರುವಾಗಲಿದೆ. ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಸೋಂಕಿತರನ್ನು ತ್ವರಿತವಾಗಿ ಕೋವಿಡ್ ಆಸ್ಪತ್ರೆಗೆ ಸೇರಿಸಲು ಸೆಂಟ್ರಲೈಸ್ಡ್ ಬೆಡ್ ಅಲೋಕೇಶನ್ ಸಿಸ್ಟಂ (ಕೇಂದ್ರೀಯ ಬೆಡ್ ವ್ಯವಸ್ಥೆ) ತಂತ್ರಾಂಶಕ್ಕೆ ನಿರ್ಧಾರ ಮಾಡಲಾಗಿದೆ. ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಈಗಿರುವ 250 ಆಂಬುಲೆನ್ಸ್​ನ ಸಂಖ್ಯೆ ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಮೃತಪಟ್ಟ ಸೋಂಕಿತರ ದೇಹಗಳನ್ನ ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆಗೆ ತೀರ್ಮಾನ ಮಾಡಲಾಗಿದೆ. ಆಂಬುಲೆನ್ಸ್ ಇರುವ ಸ್ಥಳಗಳನ್ನ ಮತ್ತು ಅವುಗಳ ಚಲನವಲನಗಳನ್ನ ಗುರುತಿಸಲು ಪೊಲೀಸ್ ಕಂಟ್ರೋಲ್ ರೂಮ್ ವೈರ್​ಲೆಸ್ ಸೇವೆಯನ್ನ ಬಳಸಿಕೊಳ್ಳಲು ಸರ್ಕಾರ ಸೂಚನೆ ನೀಡಲಾಗಿದೆ.ಬೆಂಗಳೂರಿನಲ್ಲಿ ಹೋಲ್​ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಜನದಟ್ಟನೆ ಹೆಚ್ಚಾಗುತ್ತಿದೆ. ಇದನ್ನ ತಪ್ಪಿಸಲು ಇನ್ನಷ್ಟು ಸಗಟು ತರಕಾರಿ ಮಾರುಕಟ್ಟೆ ತೆರೆಯಲು ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚಿಸಿದ್ಧಾರೆ.

ಬೆಂಗಳೂರನ್ನ ಹೊರಗಿನಿಂದ ಪ್ರವೇಶ ನಿರ್ಬಂಧಿಸುವ ಕುರಿತೂ ಇವತ್ತಿನ ಸಿಎಂ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಪ್ರವೇಶ ನಿರ್ಬಂಧ ಮಾಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಡ್ಡಿಯಾಗಬಹುದು. ಆದ್ದರಿಂದ ಪರೀಕ್ಷೆ ಬಳಿಕ ಆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಆಲೋಚಿಸಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಆಯುಕ್ತರ ಮೇಲೆ ಇರುವ ಕೆಲಸದ ಹೊರೆ ಕಡಿಮೆಗೊಳಿಸಲು ಬಿಬಿಎಂಪಿಯ 8 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಈ ಜಂಟಿ ಆಯುಕ್ತರ ಜೊತೆ ಕೆಲಸ ಮಾಡಲು ಕೆಎಎಸ್ ಅಧಿಕಾರಿಗಳನ್ನ ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.

ವೈದ್ಯರ ಕೊರತೆ ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಇಎಸ್ಐ ವೈದ್ಯರನ್ನ ಕೋವಿಡ್ ಕರ್ತವ್ಯಕ್ಕೆ ಜೋಡಿಸಿಕೊಳ್ಳಲಾಗುತ್ತಿದೆ. ಪರೀಕ್ಷಾರ್ಥಿ ತಹಶೀಲ್ದಾರ್​ಗಳನ್ನ ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್​ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲು ಸರ್ಕಾರ ಸೂಚಿಸಿದೆ.

ಭಾನುವಾರದ ಲಾಕ್‍ಡೌನ್ ದಿನ ಏನಿರುತ್ತೆ?
* ಅಗತ್ಯ ಸೇವೆಗಳಾದ ಆಸ್ಪತ್ರೆ, ತರಕಾರಿ
* ಅಗತ್ಯ ವಸ್ತುಗಳು ಸಾಗಾಟ (ಹಾಲು, ತರಕಾರಿ)
* ಕೆಎಸ್‍ಆರ್ ಟಿಸಿ ಬಸ್

ಏನಿರಲ್ಲ?
* ಬಸ್, ಆಟೋ, ಟ್ಯಾಕ್ಸಿ ಇರಲ್ಲ
* ಹೇರ್ ಕಟ್ಟಿಂಗ್ ಸಲೂನ್
* ಅಂಗಡಿ ಮುಗ್ಗಟ್ಟುಗಳು
* ಇನ್ನಿತರ ಸೇವೆಗಳು

ಇಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
1. ಜುಲೈ 5ನೇ ತಾರೀಖಿನಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್. (ವಸ್ತುಗಳ ಸಾಗಾಣಿಕೆಗೆ ನಿರ್ಬಂದವಿಲ್ಲ).
2. ಜುಲೈ 10ನೇ ತಾರಿಖಿನಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಚೇರಿಗಳಿಗೆ ರಜೆ.
3. ಪ್ರತಿ ದಿನ ರಾತ್ರಿ 9.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಈಗಾಗಲೇ ಇರುವ ಕರ್ಫ್ಯೂ ಅವಧಿಯ ಬದಲಾಗಿ ರಾತ್ರಿ 8.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಅವಧಿಯಲ್ಲಿ ಬದಲಾವಣೆ
4. ಬೆಂಗಳೂರಿನಲ್ಲಿರುವ ಬೃಹತ್ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಆಗುವ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ.
5. ಕೋವಿಡ್-19 ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು (ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್) ತಂತ್ರಾಂಶದ ಮೂಲಕ ಜಾರಿ.

Comments are closed.