ಕರಾವಳಿ

ಪ್ರಕರಣ ಬೇಧಿಸಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ನೆರವಾಗುತ್ತದೆ: ಡಾ.ವಿನೋದ್ ನಾಯಕ್

Pinterest LinkedIn Tumblr

ಫಾರೆನ್ಸಿಕ್ -ಡಿಎನ್‌ಎ ಪರೀಕ್ಷೆಗಳ ಮಹತ್ವ ಕುರಿತ ವಿಚಾರ ಸಂಕಿರಣ

ಉಡುಪಿ: ಅಪರಾಧ ಕೃತ್ಯಗಳಲ್ಲಿ ಫಾರೆನ್ಸಿಕ್ ಸೈನ್ಸ್(ವಿಧಿ ವಿಜ್ಞಾನ) ನ್ಯಾಯ ಒದಗಿಸಿ ಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಡಿಎನ್‌ಎ, ಬೆರಳಚ್ಚು ಸೇರಿದಂತೆ ಹಲವು ಸಾಕ್ಷಗಳಿಂದ ಅಪರಾಧ ಪ್ರಕರಣವನ್ನು ಬೇಧಿಸಿ ಅಪರಾಧಿ ಗಳಿಗೆ ಶಿಕ್ಷೆ ಕೊಡಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ಸಾಕಷ್ಟು ನೆರವಾಗುತ್ತದೆ ಎಂದು ಮಣಿಪಾಲ ಕೆಎಂಸಿಯ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕೋಲಜಿ ವಿಭಾಗದ ಪ್ರಾಧ್ಯಾಪಕ ಡಾ.ವಿನೋದ್ ನಾಯಕ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ‘ಅಪರಾಧ ಕೃತ್ಯಗಳಲ್ಲಿ ಫಾರೆನ್ಸಿಕ್ ಹಾಗೂ ಡಿಎನ್‌ಎ ಪರೀಕ್ಷೆಗಳ ಮಹತ್ವ’ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಪ್ರತಿಯೊಂದು ಅಪರಾಧ ಪ್ರಕರಣಗಳಲ್ಲಿಯೂ ಪ್ರತಿಯೊಬ್ಬ ಅಪರಾಧಿ ಸ್ಥಳದಲ್ಲಿ ಒಂದಲ್ಲ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ. ಅದನ್ನು ಸರಿಯಾಗಿ ಕಂಡು ಹುಡುಕಬೇಕಾಗುತ್ತದೆ. ನಮ್ಮಲ್ಲಿ ಫಾರೆನ್ಸಿಕ್ ತಜ್ಞ ಸಂಖ್ಯೆ ಕಡಿಮೆ ಇದೆ. ಕೆಲವು ಜಿಲ್ಲೆಗಳಲ್ಲಿ ಫಾರೆನ್ಸಿಕ್ ತಜ್ಞರೇ ಇಲ್ಲ. ಹಾಗಾಗಿ ಅಪರಾಧ ಸ್ಥಳಗಳಲ್ಲಿ ಸಾಕ್ಷಗಳನ್ನು ಸಂಗ್ರಹಿಸಲು ಸಾಕಷ್ಟು ತೊಡಕಾಗುತ್ತದೆ. ಅದಕ್ಕಾಗಿ ಇದೀಗ ಪೊಲೀಸ್ ಇಲಾಖೆಗಳಲ್ಲಿ ಕ್ರೈಮ್ ಸೀಮ್ ಅಧಿಕಾರಿಗಳನ್ನು ನೇಮಕ ಮಾಡ ಲಾಗುತ್ತದೆ. ಫಾರೆನ್ಸಿಕ್ ಸೈನ್ಸ್ ಬಗ್ಗೆ ತರಬೇತಿ ಪಡೆದಿರುವ ಅವರ ಅಪರಾಧ ಸ್ಥಳದಲ್ಲಿ ಸಿಗುವ ಸಾಕ್ಷಗಳನ್ನು ಸಂಗ್ರಹಿಸಿ ಫಾರೆನ್ಸಿಕ್ ತಜ್ಞರಿಗೆ ಒಪ್ಪಿಸುತ್ತಾರೆ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ಶಂಕರ್ ಎಂ.ಬಿ. ಮಾತನಾಡಿ, ಫಾರೆನ್ಸಿಕ್ ಅಂದರೆ ಕೇವಲ ಮರಣೋತ್ತರ ಪರೀಕ್ಷೆ ಮಾತ್ರವಲ್ಲ. ಅಪರಾಧ ಸ್ಥಳದಿಂದಲೇ ಇವರ ಕೆಲಸ ಆರಂಭವಾಗಿ, ಆರೋಪಿಗೆ ಶಿಕ್ಷೆ ಸಿಗುವವರೆಗೂ ಮುಂದು ವರೆಯುತ್ತದೆ. ಅಪರಾಧ ಸ್ಥಳಗಳಲ್ಲಿ ಸಿಗುವ ಕುರುಹುಗಳನ್ನು ಸರಿಯಾಗಿ ಗುರುತಿಸಿ, ಅವುಗಳನ್ನು ಸಂಗ್ರಹಿಸಿ, ಮುಂದೆ ಪರಿಶೀಲಿಸುವುದರಿಂದ ಅಪರಾಧ ಯಾರು ಮಾಡಿದ್ದಾರೆ ಮತ್ತು ಹೇಗೆ ಮಾಡಿದ್ದಾರೆ ಎಂಬುದನ್ನು ಫಾರೆನ್ಸಿಕ್ ಸೈನ್ಸ್ ನಿಂದ ಪತ್ತೆ ಹಚ್ಚ ಬಹುದಾಗಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ರಹೀಂ ಉಜಿರೆ ಸ್ವಾಗತಿಸಿ,‌ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Comments are closed.