ಕರಾವಳಿ

ಪಂಜರ ಮೀನು ಕೃಷಿಯಲ್ಲಿ ಹೊಸ ಪ್ರಯೋಗ ಯಶಸ್ವಿ; ಸಿಲ್ವರ್ ಪಾಂಪೆನೊ, ಇಂಡಿಯನ್ ಪಾಂಪೆನೊ, ಪಚ್ಚಿಲೆ‌ ಬಂಪರ್ ಕೃಷಿ..!

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕರಾವಳಿಯ ಸಮುದ್ರ ಮೀನಿಗೆ ಎಲ್ಲೆಡೆ ಹೆಚ್ಚು ಬೇಡಿಕೆ. ಆದರೆ ಮತ್ಸ್ಯಕ್ಷಾಮ ಮೊದಲಾದ ಸಮಸ್ಯೆಗಳಿಂದಾಗಿ ಇತ್ತೀಚೆಗೆ ಕೆಲವು ವರ್ಷಗಳಿಂದ ನದಿಯಲ್ಲಿ ಪಂಜರವಿಟ್ಟು ಬೆಳೆಸುವ ವಿವಿಧ ರೀತಿಯ ಮೀನುಗಳಿಗೆ ಬಾರೀ ಬೇಡಿಕೆ ಬರುತ್ತಿದ್ದು ಪಂಜರ ಮೀನು ಕೃಷಿ ಮಾಡುತ್ತಿರುವವರ ಜೇಬು ತುಂಬಿ ಸ್ವಾವಲಂಭಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.

ಕುಂದಾಪುರ ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಪಂಜರ ಮೀನು ಕೃಷಿಯಲ್ಲಿ ತೊಡಗಿಸಿಕೊಂಡು ಸೀ ಬಾಸ್ ಮೊದಲಾದ ತಳಿ ಮೀನುಗಳನ್ನು ಬೆಳೆಯುತ್ತಿದ್ದ ತಲ್ಲೂರಿನ ರವಿ ಖಾರ್ವಿ ಉತ್ತಮ ಆದಾಯ ಗಳಿಸಿ ಎಲ್ಲರಿಗೆ ಮಾದರಿಯಾಗಿದ್ದರು. ಈ ಬಾರಿ ತಾಲೂಕಿನ ತಲ್ಲೂರು ಸಮೀಪದ ನದಿಯಲ್ಲಿ ಪಂಜರ ಮೀನು ಕೃಷಿ ಮಾಡಿದ್ದು 5-6 ತಿಂಗಳ ಒಳಗೆ ಉತ್ತಮವಾಗಿ ಬೆಳೆಯಬಲ್ಲ, ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿರುವ ಇಂಡಿಯನ್ ಪಾಂಪೆನೊ, ಸಿಲ್ವರ್ ಪಾಂಪೆನೊ (ಹೊಳೆ ಮಾಂಜಿ, ಹೊಳೆ ಪಾಂಪ್ರೆಟ್, ಮಂಗಳೂರಿನಲ್ಲಿ ಬಲೆ ಒಡು) ಜೊತೆಗೆ ಪಚ್ಚಿಲೆ ಕೃಷಿ ಮಾಡಿದ್ದಾರೆ. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್ (ಎನ್.ಎಫ್.ಡಿ.ಬಿ.) ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ (ಸಿ.ಎಂ.ಎಫ್.ಆರ್.ಐ) ಮೂಲಕ ಮಂಗಳೂರು ಪ್ರಾದೇಶಿಕ ಕೇಂದ್ರ ಈ ಯೋಜನೆ ಅನುಷ್ಟಾನಗೊಳಿಸಿದೆ.

ಮೀನು ಕಟಾವು ಮೇಳ: ತಲ್ಲೂರು ಸಮೀಪದ ಹೊಳೆಯಲ್ಲಿರುವ ರವಿ ಖಾರ್ವಿಯವರ ಪಂಜರ ಮೀನು ಕೃಷಿ ಪ್ರದೇಶಕ್ಕೆ ಅಧಿಕಾರಿಗಳ ತಂಡ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿದ್ದು ಮೀನುಗಳು ಹಾಗೂ ಪಚ್ಚಿಲೆ ಮೇಲಕ್ಕೆ ತೆಗೆಯುವ ಕಾರ್ಯ ನಡೆದು ಮೀನುಗಳ ಗಾತ್ರ ನೋಡಿ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇದೊಂದು ಯಶಸ್ವಿ ಪ್ರಯೋಗ ಎಂದು ಬಣ್ಣಿಸಿದ ಅವರು ಜಿಲ್ಲೆಯ ಇತರೆಡೆ ನಾಳೆಯಿಂದ ಹಾರ್ವೆಸ್ಟಿಂಗ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ರಾಜೇಶ್ ಕೆ.ಎಂ, ವಿಜ್ಞಾನಿ ಸುನೀಲ್ ಕುಮಾರ್, ತಾಂತ್ರಿಕ ಅಧಿಕಾರಿ ನಟರಾಜ್ ಜಿ.ಡಿ., ಸಿಬ್ಬಂದಿಗಳಾದ ದರ್ಶನ್, ಅಖಿಲಾ, ಅಬ್ದುಲ್ ಲುಹಾಯಿ, ಧರ್ಮರಾಜ್, ಕುಂದಾಪುರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಮೀನುಗಾರ ಮಂಜುನಾಥ್ ಮೊದಲಾದವರಿದ್ದರು.

ಬಂಪರ್ ಮೀನುಗಳು..!
ಡಿಸೆಂಬರ್ ತಿಂಗಳಿನಲ್ಲಿ ಒಂದೊಂದು ಪಂಜರಕ್ಕೆ 2000 ಮೀನು ಮರಿಗಳಂತೆ 2 ಪಂಜರಕ್ಕೆ ಪಾಂಪೆನೊ‌ ಮೀನು ಮರಿಗಳನ್ನು ಬಿಡಲಾಗಿದ್ದು ಜನವರಿ ತಿಂಗಳಿನಲ್ಲಿ ಪಚ್ಚಿಲೆ ಕೃಷಿಗೆ ಆರಂಭ ನೀಡಲಾಗಿತ್ತು. ಈ‌ ಮೊದಲು ಪಂಜರ ಮೀನು ಕೃಷಿಯಲ್ಲಿ ಸಾಕುವ ಮೀನುಗಳಿಗೆ ಇತರ ಮೀನುಗಳ ತುಂಡುಗಳನ್ನು ಆಹಾರವಾಗಿ ಬಳಸಲಾಗುತ್ತಿತ್ತು. ಆದರೆ ಈ ಮೀನುಗಳಿಗೆ ಪೆಲಿಟೆಡ್ ಫೀಲ್ಡ್ ಅಥವಾ ಆಹಾರದ ತುಂಡುಗಳನ್ನು 1 ಕೆ.ಜಿ ಮೀನುಗಳ ಸರಾಸರಿ ಲೆಕ್ಕದಲ್ಲಿ ದಿನಕ್ಕೆ 30 ಗ್ರಾಂನಂತೆ ಮೂರು ಬಾರಿ ಹಾಕಲಾಗಿದ್ದು ಈ ಮೀನುಗಳು 60-70% ತಿನ್ನುತ್ತಿದ್ದು, ಉಳಿದ 30% ಆಹಾರ ಪಚ್ಚಿಲೆ ತಿಂದು ಬೆಳೆದಿದೆ. ಅಂದಾಜು 5 ರಿಂದ ಐದೂವರೆ ತಿಂಗಳಿನಲ್ಲಿ ಸಿಲ್ವರ್ ಪಾಂಪೆನೊ 32 ಸೆಂಮೀ ಉದ್ದ 576 ಗ್ರಾಂ ಗರಿಷ್ಟ ತೂಕ ಹೊಂದಿದೆ. ಇಂಡಿಯನ್ ಪಾಂಪೆನೊ 31.6 ಸೆಂಮೀ ಉದ್ದ 537 ಗ್ರಾಂ ಗರಿಷ್ಟ ತೂಕ ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 480-500 ರೂ. ಬೆಲೆಯಿದೆ. ಮೀನಿನ ಮರಿ, ಪಂಜರ ನಿರ್ಮಾಣ, ಆಹಾರ ಮೊದಲಾದ ಖರ್ಚು ಸೇರಿ‌‌ ಒಂದು ಕಿಲೋ ಮೀನು ಬೆಳೆಯಲು 200 ರೂ. ಅಗತ್ಯವಿದ್ದು ಇಂದಿನ ಮಾರುಕಟ್ಟೆ ಬೆಲೆಯಲ್ಲಿ ದುಪ್ಪಟ್ಟು ಲಾಭ ಖಂಡಿತ. ಈ ಮೀನುಗಳಿಗೆ ಗೋವಾ, ಕೇರಳದಲ್ಲಿ ಒಳ್ಳೆ ಮಾರುಕಟ್ಟೆಯಿದೆ. ಪಚ್ಚಿಲೆಗೂ ಕೂಡ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ 4 ಕಡೆ ಅನುಷ್ಟಾನ:
ಉಡುಪಿ ಸಮೀಪದ ಪಡುತೋನ್ಸೆ ಗ್ರಾಮದ ಸ್ವರ್ಣಾ ನದಿ ಅಳಿವೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಸಿದ ‘ಇಂಡಿಯನ್ ಪೊಂಪಾನೊ’ ಪಂಜರ ಮೀನು ಕೃಷಿ ಪ್ರಯೋಗ ಯಶಸ್ವಿಯಾಗಿತ್ತು. ಮುಂದುವರಿದು‌ ಬಹುಸ್ತರ ಮೀನು ಕೃಷಿ ನಡೆಸುವ ಚಿಂತನೆಯಡಿ ಇಂಡಿಯನ್ ಪೊಂಪೆನೊ ಜೊತೆಗೆ ‘ಸಿಲ್ವರ್ ಪೊಂಪೆನೊ’‌ ಹಾಗೂ ಪಚ್ಚಿಲೆ ಬೆಳೆಯುವ ಪರಿಣಾಮಕಾರಿ ಯೋಜನೆಗೆ ಮುಂದಾಗಿದ್ದು ಪ್ರಸಕ್ತ ಜಿಲ್ಲೆಯ ಪಡುತೊನ್ಸೆಯಲ್ಲಿ ರೋಹಿತ್, ಕುಂದಾಪುರದ ತಲ್ಲೂರಿನಲ್ಲಿ ರವಿ ಖಾರ್ವಿ, ಬೈಂದೂರಿನ ತಾರಾಪತಿ ಅಳಿವೆಕೋಡಿಯಲ್ಲಿ ಬಾಬು ಖಾರ್ವಿ, ಕೊಡೇರಿಯಲ್ಲಿ ಪ್ರಜ್ವಲ್ ‘ಸಮಗ್ರ ಬಹುಸ್ಥರ ಜಲಕೃಷಿ’ಯಡಿ ಮೀನು, ಪಚ್ಚಿಲೆ ಸಾಕಿದ್ದಾರೆ. ಎನ್.ಎಫ್.ಡಿ.ಬಿ. ಪ್ರಾಯೋಜಿತವಾದ ಈ ಯೋಜನೆ ಸಿ.ಎಂ.ಎಫ್.ಆರ್.ಐ ಮುತುವರ್ಜಿಯಲ್ಲಿ ಸಮಗ್ರ ಬಹುಸ್ಥರ ಜಲಕೃಷಿ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಡಿ ಅನುಷ್ಟಾನಗೊಳಿಸಿದೆ. ಮೀನು ಸಾಕಣಿಕೆದಾರರಿಗೆ ಯಾವುದೇ ಹಣ ಮೊದಲಿಗೆ ಖರ್ಚು ಮಾಡುವ ಅಗತ್ಯವಿಲ್ಲ. ಸಮಯ ನೀಡಿ ಶ್ರಮ ವಹಿಸಿ ಕೆಲಸ ಮಾಡಿದರೆ ಬರುವ ಲಾಭಾಂಶ ಸಂಪೂರ್ಣ ಅವರದ್ದಾಗಿರುತ್ತದೆ.
– ಡಾ. ರಾಜೇಶ್ ಕೆ.ಎಂ (ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ)

ಕಳೆದ 10 ವರ್ಷದಿಂದ ಪಂಜರ ಮೀನು ಕೃಷಿ ಮಾಡುತ್ತಿದ್ದು ಈ ಬಾರಿ ಎನ್.ಎಫ್.ಡಿ.ಬಿ. ಹಾಗೂ ಸಿ.ಎಂ.ಎಫ್.ಆರ್.ಐ, ಮೀನುಗಾರಿಕೆ ಇಲಾಖೆಯವರ ಪ್ರೋತ್ಸಾಹ, ಮುತುವರ್ಜಿಯಲ್ಲಿ‌ ಮೂರು ರೀತಿಯ ಮೀನು ಕೃಷಿ ಮಾಡಿದ್ದೇವೆ. ಈ ಹಿಂದೆ ಮಾಡಿದ ಪಂಜರ ಮೀನು ಸಾಕಣಿಕೆಗೂ ಪ್ರಸ್ತುತ ಮಾಡಿದ್ದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮೀನುಗಳಿಗೆ ಆಹಾರ ನೀಡುವ ವಿಚಾರದಲ್ಲಿ ಬದಲಾವಣೆ ಮಾಡಲಾಗಿದ್ದು ನಾಲ್ಕೈದು ತಿಂಗಳಿನಲ್ಲಿ ಮೀನುಗಳ ಬೆಳವಣಿಗೆಯೂ ನಿರೀಕ್ಷೆಗೂ ಮೀರಿ ಬಂದಿದೆ. ಮಾರುಕಟ್ಟೆಯಲ್ಲಿ ಕೂಡ ಈ ಮೀನುಗಳಿಗೆ ಬೇಡಿಕೆಯಿದ್ದು ಒಳ್ಳೆಯ ದರ ಸಿಗುವ ನಿರೀಕ್ಷೆಯಿದೆ.
– ರವಿ ಖಾರ್ವಿ (ಪಂಜರ ಮೀನುಗಾರಿಕೆ ಮಾಡುವವರು)

Comments are closed.