ಕರ್ನಾಟಕ

ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಪ್ರಶ್ನೆಯೇ ಇಲ್ಲ: ಎಲ್ಲ ಪಕ್ಷದ ಶಾಸಕರೊಂದಿಗಿನ ಸಭೆಯಲ್ಲಿ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.. ಹೀಗಾಗಿ ಲಾಕ್ ಡೌನ್ ಹೇರುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಕೋವಿಡ್19 ಕುರಿತಂತೆ ಬೆಂಗಳೂರಿನ ಎಲ್ಲ ಪಕ್ಷದ ಶಾಸಕರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯಡಿಯೂರಪ್ಪ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಲಾಕ್ ಡೌನ್ ಕುರಿತು ಸ್ಪಷ್ಟನೆ ನೀಡಿದರು.

ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ವಪಕ್ಷ ಶಾಸಕರ ಸಭೆ ಕರೆದಿದ್ದೇನೆ. ಅವರ ಜೊತೆ ಚರ್ಚೆ ಮಾಡುತ್ತೇವೆ. ಅವರ ವಿಧಾನದಸಭಾ ಕ್ಷೇತ್ರಗಳಲ್ಲಿ ಕ್ರಮ ಕೈಗೊಳ್ಳಬೇಕು. ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಈಗ ಆರ್ಥಿಕ ಪರಿಸ್ಥಿತಿ ಸಧಾರಿಸುತ್ತಿದೆ. ಹೀಗಾಗಿ ಬೆಂಗಳೂರು ಲಾಕ್‍ಡೌನ್ ಪ್ರಸ್ತಾಪ ಇಲ್ಲ. ವಿಪಕ್ಷಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದುವರಿಯುತ್ತೇವೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್ ಅವರೂ ಕೂಡ ಇದೇ ವಿಚಾರವನ್ನು ಸ್ಪಷ್ಟಪಡಿಸಿದ್ದರು. ‘ಪರಿಸ್ಥಿತಿ ಕುರಿತಂತೆ ಚರ್ಚಿಸಲು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಎಲ್ಲ ಪಕ್ಷಗಳ ಶಾಸಕರ ಸಭೆ ಕರೆಯಲಾಗಿದೆ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಿನಲ್ಲಿ ಕೋವಿಡ್19 ಸೋಂಕು ಹರಡುವುದನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ವಿಧಾನಸೌಧದ ಕಮಿಟಿ ಕೊಠಡಿಯಲ್ಲಿ ಸಂಬಂಧಪಟ್ಟ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳೊಂದಿಗೆ ಸಭೆ‌ ನಡೆಸಲಾಯಿತು. ಕಟ್ಟುನಿಟ್ಟಿನ ಗೃಹ ಕ್ವಾರಂಟೈನ್, ಸೂಕ್ತ ಚಿಕಿತ್ಸೆ ಸೇರಿದಂತೆ ಎಲ್ಲ ಮಾರ್ಗಸೂಚಿಗಳ ಬಿಗಿ ಪಾಲನೆಗೆ ಸೂಚನೆ ನೀಡಲಾಗಿದೆ.

Comments are closed.