ಬಾಗಲಕೋಟೆ (ಜೂ. 26): ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕಿಲ್ಲರ್ ಕೊರೋನಾ ವೈದ್ಯರನ್ನೂ ಬಿಡುತ್ತಿಲ್ಲ. ಬಾಗಲಕೋಟೆಯ ಸರ್ಕಾರಿ ವೈದ್ಯ ಕೊರೋನಾಗೆ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾಗೆ ಬಲಿಯಾದ ಎರಡನೇ ವೈದ್ಯ ಇವರಾಗಿದ್ದಾರೆ.
ಬಾಗಲಕೋಟೆಯ ಕಲಾದಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ವರ್ಷದ ವೈದ್ಯ ಮೊದಲೇ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಹತ್ತು ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಪೋರ್ಟಿಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಎಲ್ಲ ರೀತಿಯ ಚಿಕಿತ್ಸೆ ನೀಡಲಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ನಿನ್ನೆ ಮೃತಪಟ್ಟಿದ್ದಾರೆ.
ಕೋವಿಡ್ ನಿಯಮದಂತೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಅವಿವಾಹಿತ ವೈದ್ಯನಿಗೆ ಸೋಂಕು ಹೇಗೆ ತಗುಲಿದೆ ಎನ್ನುವುದರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಮೃತಪಟ್ಟ ವೈದ್ಯ ಕುಟುಂಬಕ್ಕೆ ಕೊರೋನಾ ವಾರಿಯರ್ ವಿಮಾ ನಿಧಿಯಿಂದ 5೦ ಲಕ್ಷ ಪರಿಹಾರ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕೊರೋನಾ ವಾರಿಯರ್ಸ್ ಆಗಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಯುವ ಉತ್ಸಾಹಿ ವೈದ್ಯನನ್ನು ನಾವು ಕಳೆದುಕೊಂಡಿದ್ದೇವೆ. ಕೊರೋನಾ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ವೈದ್ಯರಿಗೆ ಇದು ಆತಂಕದ ಸಂಗತಿ ಎಂದು ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ್ ದೇಸಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ 30ಕ್ಕೂ ಹೆಚ್ಚು ವೈದ್ಯರು ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಲ್ಲೂ ವೈದ್ಯರು ಇದೇ ರೀತಿ ಆತಂಕದಲ್ಲಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಕೊರೋನಾ ವಾರಿಯರ್ಸ್ಗಳ ರಕ್ಷಣೆಗೆ ಮುಂದಾಗಬೇಕು.
Comments are closed.